ಚಿಕ್ಕಮಗಳೂರು : ಅಕ್ರಮ ಗಣಿಗಾರಿಕೆ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

88
firstsuddi

ಚಿಕ್ಕಮಗಳೂರು : ಕಡೂರು ತಾಲ್ಲೂಕಿನ ಕಸಬಾ ಹೋಬಳಿ ಸುತ್ತಮುತ್ತ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ತಡೆಗಟ್ಟುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಡೂರು ತಾಲ್ಲೂಕಿನ ಕಸಬಾ ಹೋಬಳಿಯ ಸುತ್ತಮುತ್ತ ವಿಶೇಷವಾಗಿ ತುರುವನಹಳ್ಳಿ, ಗೆದ್ಲೇಹಳ್ಳಿ, ಮಲ್ಲೇಶ್ವರ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲು ಕ್ರಶರ್, ಗಣಿಗಾರಿಕೆ ನಡೆಯುತ್ತಿದೆ. ಬೃಹತ್ ಗಾತ್ರದ ಯಂತ್ರಗಳಿಂದ ಬಂಡೆಗಳನ್ನು ಒಡೆಯುವುದು, ಕಲ್ಲು ಕೊರೆಯುವುದು, ಡೈನಾಮೆಟ್ ಸಿಡಿಸುವುದು, ಹಗಲು ರಾತ್ರಿಯೆನ್ನದೆ ಸಾಗುತ್ತಿದೆ ಎಂದರು.

ಇದರಿಂದಾಗಿ ಪರಿಸರ ಮಾಲಿನ್ಯವಾಗುತ್ತಿದೆ, ಗಣಿಗಾರಿಕೆಯ ಧೂಳಿನಿಂದಾಗಿ ಸುತ್ತಮುತ್ತಲ ಕೃಷಿ ಜಮೀನು ಹಾಳಾಗುತ್ತಿದೆ, ಡೈನಾಮೆಟ್ ಸಿಡಿತದ ಭಯಾನಕ ಶಬ್ದದಿಂದಾಗಿ ಮನೆಗಳು ಬಿರುಕು ಬಿಡುತ್ತಿದ್ದು, ಗ್ರಾಮಸ್ಥರು ಭಯದ ನೆರಳಿನಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಾಸವಿರುವ ಬೌದ್ದ ಧರ್ಮೀಯ ಕುಟುಂಬಗಳಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಬೌದ್ದ ವಿಹಾರ ನಿರ್ಮಿಸಲು ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಬೌದ್ದ ವಿಹಾರ ಇಲ್ಲದಿರುವುದರಿಂದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೌದ್ದ ಧರ್ಮಿಯ ಕಾರ್ಯಕರ್ತರಿಗೆ ಮದುವೆ, ಗೃಹ ಪ್ರವೇಶ, ನಾಮಕರಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಸ್ಥಳವಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಬೌದ್ದ ವಿಹಾರ ನಿರ್ಮಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ|| ಬಿ.ಕೃಷ್ಣಪ್ಪ ಬಣದ ಹೆಸರಿಗೆ ನಗರದ ಸಮೀಪದಲ್ಲಿ 10 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಹೆಚ್.ಇ.ದೊಡ್ಡಯ್ಯ, ಸಗುನಪ್ಪ, ಇಲಿಯಾಜ್ ಅಹಮದ್, ಜಿಲ್ಲಾ ಖಜಾಂಚಿ ವಿ.ಧರ್ಮೇಶ್, ಎಂ.ಸಿ.ಜಯರಾಮಯ್ಯ, ಕೇದಿಗೆರೆ ಬಸವರಾಜ್, ಮಂಜುನಾಥ್, ಚಂದ್ರು, ಬಸವರಾಜ್ ಹಾಜರಿದ್ದರು.