ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಬೆಂಬಲಿಗರು ಜಾರಿ ನಿರ್ದೇಶನಾಲಯದ ಕಚೇರಿ ಹೊರ ಭಾಗ ಪ್ರತಿಭಟನೆ ನಡೆಸುತ್ತಿದ್ದು, ಈ ಮಧ್ಯೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಪೊಲೀಸರಿಂದ ತಪ್ಪಿಸಕೊಳ್ಳಲು ಎದ್ನೋ ಬಿದ್ನೋ ಅಂತ ಓಡಿ ಹೋದ ಪ್ರಸಂಗ ನಡೆಯಿತು.
ಶ್ರೀನಿವಾಸ್ ಅವರು ತಮ್ಮ ಕಾರಿನಲ್ಲಿ ಇಡಿ ಕಚೇರಿಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಇದರಿಂದ ಕಂಗಾಲಾದ ಶ್ರೀನಿವಾಸ್, ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ರು. ಕೊನೆಗೆ ತಾವು ಕುಳಿತಿದ್ದ ಕಾರಿನಿಂದ ಇಳಿದು, ಎದ್ನೋ ಬಿದ್ನೋ ಅಂತ ಓಡಿ ಹೋದರು. ಹೀಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.
Video of @srinivasiyc 😂😂😂
When Delhi Police went to arrest Indian Youth Congress President Srinivas BV, he ran away😂 pic.twitter.com/uAic6dGcVJ
— Rijul (@RijulJK) June 13, 2022
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡಿ ನೋಟಿಸ್ ಕೊಟ್ಟಿರುವುದನ್ನು ವಿರೋಧಿಸಿ ದೇಶಾದ್ಯಂತ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಇಡಿ ಕಚೇರಿ ಬಳಿಯೂ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಪ್ರಿಯಾಂಕ್ ಖರ್ಗೆ, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಲಾಲ್ ಬಾಗ್ ಗೇಟ್ ನಿಂದ ಶಾಂತಿನಗರದ ಟಿಟಿಎಂಸಿಯಲ್ಲಿನ ಇಡಿ ಕಚೇರಿಗೆ ಕೈ ಕಾರ್ಯಕರ್ತರ ಜೊತೆಗೂಡಿ ಕೈ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಜೆಪಿ ಶಾಂತಿನಗರ ಬಸ್ ನಿಲ್ದಾಣ ಸಿಗ್ನಲ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆ ಹಿಡಿದರು. ಈ ವೇಳೆ ಪೊಲೀಸರು ಮತ್ತು ಕೈ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬ್ಯಾರಿಕೇಡ್ ಹತ್ತಿ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರು ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು.










