ಚಿಕ್ಕಮಗಳೂರು : ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಿದರೆ ಮಾತ್ರ ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ : ಕೆ.ನಾಗರಾಜ್.

149
First suddi

ಚಿಕ್ಕಮಗಳೂರು : ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಿದರೆ ಮಾತ್ರ ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ನಾಗರಾಜ್ ಹೇಳಿದರು.
ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ನಗರದ ಎಂಇಎಸ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರದಿಂದ ಗಳಿಸುವ ಅಂತಸ್ತು, ಗೌರವ ಮತ್ತು ಹಣದಿಂದ ತೃಪ್ತಿ ದೊರೆಯುವುದಿಲ್ಲ, ಸೇವಾವಧಿಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಿ ಅವರ ಸೇವೆ ಮಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಹಾಗಾಗಿ ಅಧಿಕಾರಿಗಳು, ಸಿಬ್ಬಂಧಿಗಳು, ನೌಕರರು ತಮ್ಮ ಕರ್ತವ್ಯವನ್ನು ಸೇವೆಯೆಂದು ಭಾವಿಸಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್ ಮೂರ್ತಿ ನಾಗರಾಜ್ ಅವರು ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದರು, ಎಲ್ಲರಿಗೂ ಉತ್ತಮವಾಗಿ ಸ್ಪಂದಿಸುತ್ತಿದ್ದರು ಎಂದು ಹೇಳಿದರು.
ಉಪನಿರ್ದೇಶಕ ಕೆ.ನಾಗರಾಜ್ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಕಳೆದ ಸಾಲಿನಲ್ಲಿ ನಿವೃತ್ತರಾದ ಪ್ರಾಚಾರ್ಯರುಗಳಾದ ಟಿ.ಎಂ.ರುದ್ರಮುನಿ, ಬಿ.ಎನ್.ಗುರುಮೂರ್ತಿ, ಜಾನ್ ವಿಲ್ಸನ್, ನಾರಾಯಣ, ತಿಪ್ಪೇಸಿದ್ದನಾಯಕ್, ಬಿ.ಆರ್.ಶ್ರೀನಿವಾಸ್ ಮೂರ್ತಿ, ದಯಾನಂದ್ ಅವರನ್ನು ಗೌರವಿಸಲಾಯಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಎಂಇಎಸ್ ಕಾಲೇಜಿನ ಪ್ರಾಚಾರ್ಯೆ ಜಯಶ್ರೀ, ನಿಯೋಜಿತ ಉಪನಿರ್ದೇಶಕ ರಾಜಪ್ಪ, ಸಂಘದ ಉಪಾಧ್ಯಕ್ಷರಾದ ಹಳದಪ್ಪ, ಮಿನಿ ಥಾಮಸ್, ಶಶಿಧರ್, ಖಜಾಂಚಿ ಶಿವಮೂರ್ತಿ, ಕಳಸಾಪುರ ಕಾಲೇಜಿನ ಪ್ರಾಚಾರ್ಯ ಹೆಚ್.ಎಂ.ನಾಗರಾಜರಾವ್ ಉಪಸ್ಥಿತರಿದ್ದರು.