ಚಿಕ್ಕಮಗಳೂರು : ಜಲ ಕ್ರೀಡೋತ್ಸವವು ಸಾಹಸ ಪ್ರವೃತ್ತಿ ಕ್ರೀಡೆಯಾಗುವುದರ ಜೊತೆಗೆ ಮನೋಲ್ಲಾಸ ನೀಡಿ ಹರ್ಷವನ್ನು ಉಂಟುಮಾಡುತ್ತದೆ ಎಂದು ಪ್ರವಾಸೋಧ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಅಭಿಪ್ರಾಯಿಸಿದರು.
ಅವರು ನಿನ್ನೆ ನಗರದ ನಲ್ಲೂರು ಬಳಿಯ ಕೆರೆಯಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಜಲ ಸಾಹಸೋತ್ಸವ ಕ್ರೀಡೆಯನ್ನು ಉದ್ಠಾಟಿಸಿ ಚಾಲನೆ ನೀಡಿ ಮಾತನಾಡಿದರು.
ಚಿಕ್ಕಮಗಳೂರು ಹಬ್ಬದ ವಿಶೇಷವಾಗಿ ಜಿಲ್ಲೆಯ ಜನತೆಗೆ ರ್ಯಾಪ್ಟ್(ಸ್ಟಿಲ್ ವಾಟರ್), ಜೆಟ್ ಸ್ಕೀ, ಬಂಪರ್ ರೈಡ್, ವಾಟರ್ ರೋಲರ್, ಬನಾನ ರೈಡ್, ಸ್ಕೂಬಾ ಡೈವಿಂಗ್, ಸೇರಿದಂತೆ ಹಲವು ಮಾದರಿಯ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇದು ನಮ್ಮ ನಮ್ಮೆಲ್ಲರ ಹಬ್ಬವಾಗಿದ್ದು, ಎಲ್ಲರೂ ಹರ್ಷದಿಂದ ಪಾಲ್ಗೊಳ್ಳಿ ಎಂದರು.
ಜಿಲ್ಲೆಯಲ್ಲಿನ ಅಯ್ಯನ ಕೆರೆಯು ಸಾಹಸ ಕ್ರೀಡೆಗಳಿಗೆ ಉತ್ತಮ ವಿಶಾಲವಾದ ಪರಿಸರ ಹೊಂದಿದ ಸ್ಥಳವಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಹಸ ಕ್ರೀಡೆಗಳನ್ನು ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು, ಇದರಿಂದ ಜಿಲ್ಲೆಯ ಜನತೆಗೆ, ಹಾಗೂ ಜಲಸಾಹಸ ಕ್ರೀಡಾಸಕ್ತರಿಗೆ ಅನುಕೂಲವಾಗಲಿದೆ ಎಂದರು.
ಉತ್ಸವದ ಅಂಗವಾಗಿ ಆಯೋಜಿಸಿರುವ ಈ ಜಲ ಸಾಹಸೋತ್ಸವ ಮೈ ಮನಸ್ಸನ್ನು ಹರ್ಷಗೊಳಿಸುವ ಕ್ರೀಡೆಯಾಗಿದ್ದು, ಸಾರ್ವಜನಿಕರು, ಮಕ್ಕಳು ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸಿ ಎಂದ ಅವರು ಶಾಲಾ ಮಕ್ಕಳಿಗೆ ಇದು ಸಂಪೂರ್ಣ ಉಚಿತವಾಗಿದ್ದು, ಸುರಕ್ಷಾ ಕವಚಗಳನ್ನು ಧರಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆಸರು ಗದ್ದೆ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಗಳಿಸಿದ ಸ್ಪರ್ಧಾಳುಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಪೂವಿತಾ, ಜಿಲ್ಲಾ ಉತ್ಸವದ ಕ್ರೀಡಾ ಉಪ ಸಮಿತಿ ಅಧ್ಯಕ್ಷ ಸಿ.ನಂಜಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಹೆಚ್.ಪಿ. ಮಂಜುಳಾ, ನಗರ ಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.










