ಚಿಕ್ಕಮಗಳೂರು :ಅರಣ್ಯ-ಕಂದಾಯ ಭೂಮಿ ಗೊಂದಲಕ್ಕೆ ತೆರೆ ಎಳೆಯಲು ಜಿಲ್ಲಾಧಿಕಾರಿ ಕ್ರಮ : 42 ತಂಡಗಳಿಂದ ಜಂಟಿ ಸರ್ವೆ ಆರಂಭ…

325
firstsuddi

ಚಿಕ್ಕಮಗಳೂರು : ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿ ಎಂಬ ಗೊಂದಲದಲ್ಲಿ ಜಿಲ್ಲೆಯ ಜನತೆಗೆ ಆಗುತ್ತಿದ್ದ ನಿರಂತರ ಕಿರುಕುಳಕ್ಕೆ ಇನ್ನು ಮುಕ್ತಿ ದೊರಕಲಿದೆ. ಏಕೆಂದರೆ, ಜಿಲ್ಲೆಯ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದ ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಜಂಟಿ ಸರ್ವೆಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ. ಜಿಲ್ಲೆಯ ಬಹುದೊಡ್ಡ ಸಮಸ್ಯೆಯೊಂದನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಜಿಲ್ಲಾಡಳಿತದ ಬಹುದೊಡ್ಡ ಹೆಜ್ಜೆಯಾಗಿದೆ. ಈ ಕುರಿತು ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಈ ವಿಷಯವನ್ನು ತಿಳಿಸಿದರು. ಒಂದು ವೇಳೆ ಈ ಹೆಜ್ಜೆ ಯಶಸ್ವಿಯಾದಲ್ಲಿ ಜಿಲ್ಲೆಯ ಜನತೆ ದೊಡ್ಡ ಸಂಕಷ್ಟದಿಂದ ಪಾರಾಗಲಿದ್ದಾರೆ.
ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ 20,032 ಹೆಕ್ಟೇರ್, ಮೂಡಿಗೆರೆ ತಾಲ್ಲೂಕಿನ 34,805 ಹೆಕ್ಟೇರ್, ಕಡೂರು ತಾಲ್ಲೂಕಿನ 4,472 ಹೆಕ್ಟೇರ್, ತರೀಕೆರೆ ತಾಲ್ಲೂಕಿನ 4,011 ಹೆಕ್ಟೇರ್, ಅಜ್ಜಂಪುರ ತಾಲ್ಲೂಕಿನ 2,253, ಕೊಪ್ಪ ತಾಲ್ಲೂಕಿನ 12,142, ಶೃಂಗೇರಿಯ 20,132 ಹಾಗೂ ಎನ್,ಆರ್, ಪುರ ತಾಲ್ಲೂಕಿನ 9,036 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟಾರೆ 1,07,946 ಹೆಕ್ಟೇರ್ ಪ್ರದೇಶವನ್ನು ಸರ್ವೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸರ್ವೆ ಕಾರ್ಯವು ಪೂರ್ಣಗೊಂಡು ಅರಣ್ಯ ಹಾಗೂ ಕಂದಾಯ ಭೂಮಿಗಳ ವರ್ಗೀಕರಣವಾದರೆ ಜಿಲ್ಲೆಯಲ್ಲಿನ ಭೂಮಿಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗಲು ಸಾರ್ಧಯವಾಗಲಿದೆ ಎಂದು ತಿಳೀಸಿದರು.
ಇತ್ತೀಚೆಗೆ ಜಿಲ್ಲೆಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಿ ನಡೆಸಿದ ಪ್ರಗತಿ ಪರಶೀಲನಾ ಸಭೆಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಜಂಟಿ ಸರ್ವೆ ನಡೆಸುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸಚಿವರು, ರಾಜ್ಯಾಧ್ಯಂತ ಜಂಟಿ ಸರ್ವೆ ನಡೆಸಬೇಕಿದೆ. ಪ್ರಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಮೊದಲು ಜಂಟಿ ಸರ್ವೆ ನಡೆಸಲಾಗುವುದು. ಅದರಂತೆಯೇ ಈಗ ಜಿಲ್ಲೆಯಲ್ಲಿ ಜಂಟಿ ಸರ್ವೆಕಾರ್ಯ ಆರಂಭವಾಗಿದೆ ಎಂದರು. ಈ ಹಿಂದೆ ತಾವು ಇಲ್ಲಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಡೀಮ್ಡ್ ಫಾರೆಸ್ಟ್ ವಿಚಾರವಾಗಿ ಹಲವು ದೂರುಗಳು ಬಂದಿದ್ದವು. ಆಗಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೆ ಎಂದು ಬಗಾದಿ ಗೌತಮ್ ಅವರು ತಿಳಿಸಿದರು.
ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ಸಮನ್ವಯದ ಕೊರತೆ ಇದೆ ಎಂದು ಸಹ ತಿಳಿಸಿದ್ದೆ. ಈಗಾ ಎರಡು ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗಿದೆ. ಜಂಟಿ ಸರ್ವೆಕಾರ್ಯಕ್ಕೆ 42 ತಂಡಗಳನ್ನು ರಚಿಸಲಾಗಿದೆ. ಸರ್ವೆಕಾರ್ಯವನ್ನು 50ದಿನಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಒಂದು ಬಾರಿ ಸರ್ವೆಕಾರ್ಯ ಪೂಣಗೊಂಡು ಕಂದಾಯ ಹಾಗೂ ಅರಣ್ಯ ಇಲಾಖೆ ಪ್ರದೇಶಗಳನ್ನು ಗುರುತಿಸಿದಲ್ಲಿ ಜಿಲ್ಲೆಯ ಹಲವು ಸಮಸ್ಯೆಗಳು ಪರಿಹಾರವಾದಂತಾಗುತ್ತದೆ ಎಂದರು.