– ಡಾ.ಎಂ.ಎಸ್.ಮಣಿ
“ನೀವು ಮೊದಲ ಬಟನ್ ಒತ್ತಿ ಬಿರೇಶ್ ಠಾಕೂರ್ ಅವರಿಗೆ ಮತ ಚಲಾಯಿಸಬೇಕು. ಒಂದು ವೇಳೆ ಎರಡನೇ ಬಟನ್ ಒತ್ತಿದರೆ ವಿದ್ಯುತ್ ಶಾಕ್ ಹೊಡೆಯುತ್ತದೆ. ಮೂರನೇ ಬಟನ್ ಒತ್ತಿದರೂ ಶಾಕ್ ಹೊಡೆಯಲಿದೆ. ಮೊದಲ ಬಟನ್ ಒತ್ತಿದರೆ ಮಾತ್ರ ಶಾಕ್ ಹೊಡೆಯುವುದಿಲ್ಲ.’’ ಎಂದು ಛತ್ತೀಸ್‍ಗಢದ ಅಬಕಾರಿ ಸಚಿವ ಕವಾಸಿ ಲಕ್ಷ್ಮಾ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ. “ಮತ ಯಂತ್ರದಲ್ಲಿ ಜಸ್ವಂತ್ ಸಿಂಗ್ ಅವರ ಫೋಟೋ ಮತ್ತು ಕಮಲದ ಚಿಹ್ನೆ ಇರುತ್ತದೆ. ಹಿಂದು ಮುಂದು ನೋಡದೇ ಅದಕ್ಕೆ ಮತ ಹಾಕಿ. ಒಂದು ವೇಳೆ ಬೇರೆ ಪಕ್ಷಕ್ಕೆ ಮತ ಹಾಕಿದರೆ ಅಷ್ಟೆ. ಪ್ರಧಾನಿ ಮೋದಿಯವರು ದೇಶದ ಎಲ್ಲಾ ಮತಗಟ್ಟೆಗಳಲ್ಲೂ ಕ್ಯಾಮರಾ ಹಾಕಿಸಿದ್ದಾರೆ. ನೀವು ಕಾಂಗ್ರೆಸ್‍ಗೆ ಮತ ಹಾಕಿದರೆ ಅದು ಗೊತ್ತಾಗುತ್ತದೆ.” ಎಂದು ಗುಜರಾತ್‍ನ ಭಾಜಪ ಶಾಸಕ ರಮೇಶ್ ಕಟಾರ ದಮ್ಕಿ ಹಾಕಿದ್ದಾರೆ. “ಅಪರಾಧ ಚಟುವಟಿಕೆ ಮೂಲಕ ಹಣ ಮಾಡುವವರನ್ನು ಮತ್ತು ಭ್ರಷ್ಟಾಚಾರ ಮಾಡುವವರನ್ನು ನಿಗ್ರಹಿಸಲು ಭಾಜಪ ಕಾರ್ಯಕರ್ತರು ಸಜ್ಜಾಗಿದ್ದಾರೆ. ಒಂದು ವೇಳೆ ಭಾಜಪ ಕಾರ್ಯಕರ್ತರ ಮೇಲೆ ಯಾರಾದರೂ ಬೆರಳೆತ್ತಿದರೆ, ಅಂಥಹವರ ಬೆರಳು ನಾಲ್ಕು ಗಂಟೆಯೊಳಗೆ ಇಲ್ಲವಾಗುತ್ತದೆ. ಪೂರ್ವಾಂಚಲದ ಕ್ರಿಮಿನಲ್ ವ್ಯಕ್ತಿಯು ಗಾಜಿಪುರದ ಗಡಿ ದಾಟಿ ಭಾಜಪ ಕಾರ್ಯಕರ್ತನನ್ನು ದಿಟ್ಟಿಸಿ ನೋಡಿದರೂ ಸಾಕು, ಆತನ ಕಣ್ಣು ಇರುವುದಿಲ್ಲ.” ಎಂದು ಗಾಜಿಪುರದಿಂದ ಮರು ಆಯ್ಕೆ ಬಯಸಿರುವ ಕೇಂದ್ರ ಸಚಿವ ಮನೋಜ್ ಸಿನ್ಹಾ ಬೆದರಿಸಿದ್ದಾರೆ.
“ರಾಮ ನವಮಿಯಂದು ಹಾಕಲಾಗಿದ್ದ ಹೋಲ್ಡಿಂಗ್ಸ್‍ನ್ನು ನೀತಿಸಂಹಿತೆ ಕಾರಣ ತೆರವುಗೊಳಿಸಿದ್ದರು. ನನ್ನ ಸಮ್ಮುಖದಲ್ಲಿ ತೆರವುಗೊಳಿಸಿದ್ದರೆ ಚುನಾವಣಾಧಿಕಾರಿಯ ಪ್ಯಾಂಟ್ ಬಿಚ್ಚಿಸುತ್ತಿದ್ದೆ” ಎಂದು ಪಶ್ಚಿಮ ಬಂಗಾಳ ಭಾಜಪ ರಾಜ್ಯ ಘಟಕದ ಅಧ್ಯಕ್ಷ ದಿಲಿಪ್ ಘೋಷ್ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. “ತಮಗೆ ಮತ ನೀಡದ ಮುಸ್ಲಿಂ ಮತದಾರರು ಕೆಲಸ ಕೇಳಿಕೊಂಡು ತಮ್ಮ ಬಳಿಗೆ ಬರುವುದು ಬೇಡ.” ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಇದು ಸಾಲದೆಂಬಂತೆ, “ಚುನಾವಣೆ ಬಳಿಕ ಹೆಚ್ಚು ಮತ ಪಡೆದ ಗ್ರಾಮಗಳನ್ನು ಎಬಿಸಿಡಿ ಎಂದು ಗುರ್ತಿಸುವೆ. ಭಾಜಪಗೆ ಹೆಚ್ಚು ಮತ ಹಾಕಿದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ” ಎಂದು ಎಚ್ಚರಿಸಿದ್ದಾರೆ. “ಮೋದಿಗೆ ಮತ ನೀಡದವರನ್ನು ತಾಯಿ ಗಂಡರು ಎಂದು ತೀರ್ಮಾನಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಹಾಲಿ ಶಾಸಕ ಸಿ.ಟಿ.ರವಿ ಫತ್ವಾ ಹೊರಡಿಸಿದ್ದಾರೆ. “ತಮ್ಮ ಮೇಲೆ ಎದ್ದ ವಿವಾದದ ಬಾಯಿ ಮುಚ್ಚಿಸಲು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಸಾರ್ವಜನಿಕವಾಗಿ ಎದ್ದ ಆರೋಪಕ್ಕೆ ಸಾರ್ವಜನಿಕವಾಗಿಯೇ ಉತ್ತರ ನೀಡಬೇಕಿತ್ತು. ಅದು ಬಿಟ್ಟು 49 ಮಾಧ್ಯಮ ಸಂಸ್ಥೆಗಳು ‘ಮಾನಹಾನಿಕರ’ ವಾದ ಏನನ್ನೂ ಪ್ರಸಾರ, ಪ್ರಕಟ ಮಾಡದಂತೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದಿಂದ ನಿರ್ಬಂಧಿಸಿದ್ದರು.”
ಎಲ್ಲ ಪಕ್ಷಗಳು ಪ್ರಣಾಳಿಕೆ ಬಿಡುಗಡೆಗೊಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದ ಅಥವಾ ಪ್ರಶ್ನೋತ್ತರ ನಡೆಸುವುದು ವಾಡಿಕೆ. ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ರಾಹುಲ್ ಗಾಂಧಿ, ಸೀತಾರಾಂ ಯೆಚೂರಿ, ಡಿ.ರಾಜಾ ಮತ್ತು ಇತರೆ ಪ್ರಾದೇಶಿಕ ಪಕ್ಷಗಳ ನಾಯಕರು ಮಾಧ್ಯಮ ಗೋಷ್ಠಿ ನಡೆಸಿದ್ದರು. ಆದರೆ, ಭಾಜಪ ಪ್ರಣಾಳಿಕೆ ಬಿಡುಗಡೆಯ ನಂತರ ಪ್ರಧಾನಿ ಮೋದಿ ಸೇರಿದಂತೆ ಭಾಜಪದ ಯಾವ ನಾಯಕರೂ ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸಲೇ ಇಲ್ಲ. ಇದಿರಲಿ, ಪ್ರಧಾನಿಯವರು ತಮ್ಮ ಅಧಿಕಾರದ ಅವಧಿಯಯಲ್ಲಿ ಒಂದೂ ಮಾಧ್ಯಮಗೋಷ್ಠಿ ನಡೆಸಿಲ್ಲ. ಆಯ್ದ ಕೆಲವು ಸುದ್ದಿವಾಹಿನಿಗಳಿಗೆ ಮತ್ತು ಆಯ್ದ ಕೆಲ ಪತ್ರಕರ್ತರಿಗೆ ಒಂದೆರಡು ಬಾರಿ ಸಂದರ್ಶನ ನೀಡಿದ್ದಾರೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಮೊದಲಿಗೆ ಅಮಿತ್ ಷಾ ಮಾತನಾಡಿದ್ದಾರೆ. ನಂತರ ರಾಜನಾಥ ಸಿಂಗ್, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಮಾತನಾಡಿದ್ದಾರೆ. ಕೊನೆಯಲ್ಲಿ ಪ್ರಧಾನಿ 90 ನಿಮಿಷ ಮಾತನಾಡಿದ್ದಾರೆ. ಆದರೆ, ಅವರು ಮಾತನಾಡಿದ ಕೂಡಲೇ ನಿರೂಪಕರು ವಂದನೆ ಅರ್ಪಿಸಿ, ಕಾರ್ಯಕ್ರಮ ಕೊನೆಗೊಳಿಸಿದ್ದಾರೆ. “ಇದರಲ್ಲಿ ಹೊಸತೇನೂ ಇಲ್ಲ, ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಮೋದಿಗಿಲ್ಲ. ಇದು ನಿರಂಕುಶಾಧಿಕಾರವೇ ಹೊರತು ಪ್ರಜಾಸತ್ತಾತ್ಮಕ ನಡೆಯಲ್ಲ” ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ. “ಚುನಾವಣಾ ಆಯೋಗ ಪ್ರಧಾನಿಯಿಂದ ದುರ್ಬಳಕೆ ಆಗುತ್ತಿದೆ. ಈ ರೀತಿ ದೇಶದ ಪ್ರಮುಖ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಧಾನಿಯಾದರೂ ಇದ್ದರೆ ಅದು ಪ್ರಧಾನಿನ ಕೇಂದ್ರ ಮೋದಿ ಮಾತ್ರ. ಪ್ರಸಕ್ತ ಲೋಕಸಭಾ ಚುನಾವಣೆಯಿಂದಾಗಿ ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತುಪರಿಸ್ಥಿತಿಯಂತಾಗಿದೆ” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ. ಇದಲ್ಲದೆ ದೇಶದ ಶ್ರೀಮಂತರೆಲ್ಲ ಸೇರಿ ಭಾಜಪಗೆ 1600 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಅದರಲ್ಲಿ 530 ಕೋಟಿ ರೂ.ಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ. ಮಾಧ್ಯಮಗಳು ತಮಗೆ ಬೇಕಾದ ಹಾಗೆ ಬಿತ್ತರಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಇದೆಲ್ಲವನ್ನೂ ಕಂಡಾಗ ಪ್ರಜಾಪ್ರಭುತ್ವದ ಪುನರ್ ಅನ್ವೇಷಣೆ ಆಗಬೇಕೆನಿಸುತ್ತದೆ. ಇದಕ್ಕೆ ನಾವೆಲ್ಲರೂ ಚಾಲನೆ ನೀಡಬೇಕಾದ ಅನಿವಾರ್ಯತೆ ಇದೆ. ಚುನಾವಣೆ ನಡೆಸುವುದು ಅದರಲ್ಲೊಂದು ರಾಜಕೀಯ ಪಕ್ಷ ಅಧಿಕಾರ ಹಿಡಿಯುವುದು ಇದಿಷ್ಟೇ ಪ್ರಜಾಪ್ರಭುತ್ವ ಅಲ್ಲ. ಹಾಗೆಯೇ ರಾಜಕೀಯ ಅಧಿಕಾರ ಗಳಿಸಲು ವಾಮಮಾರ್ಗ ಅನುಸರಿಸುವುದು, ಅಬ್ಬರದ ಪ್ರಚಾರ ಮಾಡುವುದು, ಕುಟಿಲ ಮಾರ್ಗಗಳನ್ನು ಆಧರಿಸಿ ಸಾಗುವುದು ಕೂಡ ಪ್ರಜಾಪ್ರಭುತ್ವ ಅಲ್ಲ. ಚುನಾವಣೆಯಲ್ಲಿ ಬಹುಮತ ಗಳಿಸಿದ ಪಕ್ಷ ಅಧಿಕಾರ ಹಿಡಿದ ಮಾತ್ರಕ್ಕೂ ಅವರನ್ನು ಪ್ರಜಾಪ್ರಭುತ್ವವಾದಿಗಳು ಎನ್ನಲಾಗುವುದಿಲ್ಲ. ಕಾರಣ, ಹೀಗೆ ಬಹುಮತ ಗಳಿಸಿದವರು ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವರು. ಧಾರ್ಮಿಕವಾಗಿ ಅಲ್ಪಸಂಖ್ಯಾತರಾದವರನ್ನು, ತಳ ಸಮುದಾಯದವರನ್ನು ಕಡೆಗಣಿಸುವರು. ಬಡವರನ್ನು, ಮಧ್ಯಮ ವರ್ಗದವರನ್ನು ಬೆದರಿಸುವರು.
ಪ್ರಜಾಪ್ರಭುತ್ವ ಒಂದು ಗಾಡಿಯಂತೆ. ಗಾಡಿಯ ಚಕ್ರಕ್ಕಿರುವ ಕಡಾಣಿಯೇ ಜನ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಶ್ರೀಸಾಮಾನ್ಯ ಕೂಡ ಸರ್ವಮಾನ್ಯ. ಪ್ರಜಾಪ್ರಭುತ್ವ ಅಂತಿಮ ಅಲ್ಲ. ಜನಸೇವೆಯೇ ಅಂತಿಮ. ಜನರ ಆಕಾಂಕ್ಷೆಗಳನ್ನು ಅರ್ಥೈಸಿಕೊಂಡು ಅವರ ಉತ್ತಮ ಬದುಕಿಗೆ ಶ್ರಮಿಸುವಂತವರಾಗಬೇಕು. ಅಲ್ಲದೆ, ಜನರು ತಮ್ಮ ಜೀವಮಾನದಲ್ಲಿ ಅತ್ಯುತ್ತಮವಾದ ಸಾಧನೆಗೈಯಲು ಅವಕಾಶ ಸೃಷ್ಟಿಸಿಕೊಡಬೇಕು. ಹಾಗೆಯೇ ಜನರಿಗೆ ನೆಮ್ಮದಿ, ಶಾಂತಿ, ಸಮೃದ್ಧಿ, ಆರೋಗ್ಯದ ಬದುಕನ್ನು ಕಲ್ಪಿಸಿಕೊಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ, ಗುರಿ, ಉದ್ದೇಶವೂ ಆಗಿದೆ.
ಮುಕ್ತ ಸ್ವಾತಂತ್ರ್ಯ, ಘನತೆಯ ಬದುಕು, ಸಮಾನ ಅವಕಾಶ, ಮುಕ್ತ ಮಾಧ್ಯಮ ಅವಕಾಶ ಒದಗಿಸಿಕೊಡುವುದರಿಂದ ಪ್ರಜಾಪ್ರಭುತ್ವ ರೂಪುಗೊಳ್ಳುತ್ತದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಿನ ಸ್ಟೆಪ್ನಿ ಟೈರ್‍ನಲ್ಲಿಟ್ಟು 2.3 ಕೋಟಿ ಹಣ ಸಾಗಿಸಲಾಗುತ್ತಿತ್ತು ಎಂಬ ಸುದ್ದಿ ಗಾಬರಿ ಮೂಡಿಸುತ್ತದೆ. ತಮಿಳುನಾಡಿನ ಡಿ.ಎಂ.ಕೆ ಮುಖಂಡರೊಬ್ಬರ ಸಿಮೆಂಟ್ ಗೋಡೌನ್‍ನಲ್ಲಿ 11.53 ಕೋಟಿ ಪತ್ತೆಯಾಗಿದೆ. ಇಲ್ಲಿನ ವೆಲ್ಲೂರು ಲೋಕಸಭಾ ಚುನಾವಣೆಯನ್ನೇ ರದ್ದುಗೊಳಿಸಲಾಗಿದೆ. ಪದ್ಮನಾಭನಗರದ ಪಾಪಯ್ಯ ಗಾರ್ಡನ್‍ನಲ್ಲಿ ವಾಸವಿದ್ದ ಭಾಜಪ ಮುಖಂಡ ವೇಣುಗೋಪಾಲ್ ಅವರ ಮನೆಯಲ್ಲಿ ಭಾಜಪ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಭಾವಚಿತ್ರ ಇರುವ 500 ಕರಪತ್ರಗಳು ಹಾಗೂ 1.39 ಲಕ್ಷ ನಗದು ಸಿಕ್ಕಿಬಿದ್ದಿದೆ. ಬೊಮ್ಮನಹಳ್ಳಿಯ ವಿರಾಟ್ ನಗರದ ಶಹಜಹಾನ್ ತಮ್ಮ ಮನೆಯ ಮೇಲೆ ತಮ್ಮ ಧರ್ಮದ ಧ್ವಜ ಹಾರಿಸಿದ್ದನ್ನು ಪಾಕ್ ದ್ವಜ ಎಂದು ಪಾಲಿಕೆ ಸದಸ್ಯ ಸಿ.ಆರ್.ರಾಮ್ ಮೋಹನ್ ರಾಜು ಹಾದಿಬೀದಿ ರಂಪ ಮಾಡಿಬಿಟ್ಟಿದ್ದಾರೆ. ಪ್ರಕರಣ ಗಂಭೀರವಾಗುತ್ತಿದ್ದಂತೆ ಧ್ವಜವನ್ನು ಮರಳಿಸಿದ್ದಾರೆ. ತನಿಖೆ ನಡೆಸುತ್ತಿರುವುದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಸ್.ಎಸ್. ನಕುಲ್ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿ ಅಶ್ವಥ ನಾರಾಯಣ ಹಾಗೂ ಅವರ ಕುಟುಂಬದ ಸದಸ್ಯರು 5 ವರ್ಷಗಳಿಂದ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಿರುವುದೇ ಇಲ್ಲ. ನೆರೆಯ ರಾಜ್ಯದ ಮಲ್ಕಾಜ್‍ಗಿರಿ ಲೋಕಸಭಾ ಕ್ಷೇತ್ರದಲ್ಲಿ ಭದ್ರವಾಗಿ ಇಟ್ಟಿದ್ದ ಇವಿಎಂಗಳ ಜೊತೆ ಟಿಆರ್‍ಎಸ್ ಮುಖಂಡ ಎನ್.ವೆಂಕಟೇಶ್ ಅನುಮತಿಯಿಲ್ಲದೇ ಫೋಟೋ ತೆಗೆಸಿಕೊಂಡಿದ್ದಾನೆ. ಮೊದಲ ಹಂತದ ಇ.ವಿ.ಎಂ ಮತದಾನದ ಬಗ್ಗೆ ಶಂಕೆ ಹೊಂದಿರುವ 21 ಪ್ರತಿಪಕ್ಷಗಳು ಶೇ.50 ರಷ್ಟು ವಿವಿ ಪ್ಯಾಟ್ (ಮತ ತಾಳೆಯಂತ್ರ) ಮತ ಪ್ರತಿಗಳನ್ನು ಕಡ್ಡಾಯವಾಗಿ ಎಣಿಸಬೇಕೆಂದು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿವೆ. ಜೊತೆಗೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿವೆ. 17 ವರ್ಷಗಳ ಹಿಂದೆ ನಾನು ಜಯಪ್ರದರನ್ನು ಈ ಕ್ಷೇತ್ರಕ್ಕೆ ಕರೆತಂದಿದ್ದೆ. ಇಷ್ಟು ವರ್ಷ ಯಾರಿಗೂ ಆಕೆಯನ್ನು ಮುಟ್ಟಲು ಬಿಟ್ಟಿರಲಿಲ್ಲ. ಆದರೆ 17 ದಿನಗಳ ಹಿಂದೆ ಆಕೆ ಖಾಕಿ ಒಳವಸ್ತ್ರ ತೊಟ್ಟಿದ್ದು ಗೊತ್ತಾಯ್ತು ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ. ಕನಿಷ್ಟ ಕ್ಷಮೆಯನ್ನೂ ಕೋರಲು ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಒಪ್ಪಿರುವುದಿಲ್ಲ. ಚುನಾವಣಾ ಪ್ರಚಾರದಲ್ಲಿ ಜಾತಿ ಹಾಗೂ ಧರ್ಮಗಳನ್ನು ಎಳೆದು ತಂದು, ದ್ವೇಷದ ಮತ್ತು ಕೀಳು ಹೇಳಿಕೆಗಳನ್ನು ನೀಡುವವರ ವಿರುದ್ಧ ತ್ವರಿತ ಕ್ರಮಕೈಗೊಳ್ಳಲು ಸುಪ್ರಿಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ನಂತರವಷ್ಟೇ ಹಾಲಿ, ಮಾಜಿ ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರವನ್ನು ಆಯೋಗ ನಿರ್ಬಂಧಿಸಿತು. ಇದು ದೇಶದಲ್ಲೇ ಮೊದಲು. ಇವನ್ನು ಕಂಡಾಗ ಭಾರತದ ಪ್ರಜಾಪ್ರಭುತ್ವ ಕುಗ್ಗಿಸಲಾಗುತ್ತಿದೆಯೇ ಎಂಬ ಚಿಂತೆ ಕಾಡುತ್ತದೆ. ನೀರಿಲ್ಲದೆ, ಉತ್ತಮ ಬೀಜ ಗೊಬ್ಬರ ಇಲ್ಲದೆ ರಾಜಸ್ಥಾನದಲ್ಲಿ ರೈತರು ಪ್ರಾಣ ಬಿಡುತ್ತಿದ್ದರು. ಅಲ್ಲಿನ ಸರ್ಕಾರ ಶಾಲಾ ಪಠ್ಯ ಪುಸ್ತಕಗಳಲ್ಲಿ ವೀರ ಸಾವರ್ಕರ್ ಅವರ ಜೀವನಗಾಥೆಯನ್ನು ಅಳವಡಿಸುತ್ತಿತ್ತು. ಇಲ್ಲಿ ನೆಹರು, ಗಾಂಧಿ, ಅಂಬೇಡ್ಕರ್‍ಗಿಂತ ಶ್ರೇಷ್ಟರಿದ್ದಾರೆ ಎಂಬುದನ್ನು ದಾಖಲಿಸುವ ಉಮೇದು ಅಲ್ಲಿನವರಿಗಿತ್ತು. ಇದಕ್ಕೆ ತಕ್ಕ ಬೆಲೆಯನ್ನು ಅಲ್ಲಿ ತೆತ್ತಿದೆ.
ಕಳೆದ 5 ವರ್ಷಗಳಲ್ಲಿ ಮಾಧ್ಯಮಗಳು ಮೋದಿ ಸರ್ಕಾರದ ಪರ ನಿಂತವು. ರಾಜಕೀಯ ವಿರೋಧಿಗಳನ್ನು ಹಣಿದವು. ಒಟ್ಟಾರೆ ಪ್ರಚಾರ ಯಂತ್ರದಂತೆ ಕಾರ್ಯ ನಿರ್ವಹಿಸಿದವು. ಕೋವನ್, ಡಾ.ಆನಂದ್ ತೇಲ್ತುಂಬ್ಡೆ, ಜೀನ್ ಡ್ರೀಜೆ ಅಂಥವರನ್ನು ದೇಶದ್ರೋಹಿಯಂತೆ ಬಿಂಬಿಸಿತು. ಅಲ್ಪಸಂಖ್ಯಾತರ ಮೇಲೆ ನಡೆದ ಹಲ್ಲೆಯನ್ನು ಪೊಲೀಸರು ಮೂಕಪ್ರೇಕ್ಷಕರಂತೆ ಕಂಡರು. ತಮ್ಮ ಸಿದ್ಧಾಂತವನ್ನು ವಿದ್ಯಾರ್ಥಿಗಳಲ್ಲಿ, ಪತ್ರಕರ್ತರಲ್ಲಿ, ಹೋರಾಟಗಾರರಲ್ಲಿ ತುಂಬಲಾಯಿತು. ಆಗ ಎದ್ದಿದ್ದೇ ಹಿಂದೂ ರಾಷ್ಟ್ರದ ಸದ್ದು.
ಅಸಮಾನತೆ ಎಂಬುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉನ್ನತ ಅಧಿಕಾರ ಹೊಂದಿರುವವರು ಮನಃಸಾಕ್ಷಿಯಿಲ್ಲದೆ ದೇಶದ ಸಂಪತ್ತನ್ನು ಲೂಟಿಗೈದಿದ್ದಾರೆ. ಇದನ್ನು ಬೆರಗುಗಣ್ಣಿನಿಂದ ನೋಡುತ್ತಿರುವ ತಳವರ್ಗಗಳು ಹೊಟ್ಟೆಗೆ ಊಟ, ತಂಗಲು ಮನೆ, ರೋಗಕ್ಕೆ ಔಷಧಿಯಿಲ್ಲದೆ ಪರದಾಡುತ್ತಿದ್ದಾರೆ. ಹೀಗಿರುವಾಗ ಅದ್ಹೇಗೆ ಸಮಾನತೆ ಮೂಡುತ್ತದೆ. ಹೀಗೆ ಅಸಮಾನತೆಯಲ್ಲೇ ಹುಟ್ಟಿ, ಅಸಮಾನತೆಯಲ್ಲೇ ಬದುಕುತ್ತಿರುವ ಅಹಿಂದ ವರ್ಗಗಳು ಇದು ನಮ್ಮ ದೇಶ, ನಮ್ಮ ನಾಡು ಎಂಬ ನೋವಲ್ಲೇ ಸಾಗುತ್ತಿದ್ದಾರೆ. ಇಷ್ಟಾದರೂ ನಾವಿಲ್ಲಿ ಪ್ರಜಾಪ್ರಭುತ್ವವಾದಿಗಳು.
ಪ್ರಜಾಪ್ರಭುತ್ವ ಉತ್ತಮವಾದ ಸರ್ಕಾರ ಅಲ್ಲ. ಆದರೆ ಇದಕ್ಕಿಂತ ಉತ್ತಮವಾದ ವ್ಯವಸ್ಥೆ ಜನರಿಗೆ ಗೊತ್ತೇ ಇಲ್ಲ. ಹೀಗಿರುವಾಗ ಉತ್ತಮ ವ್ಯವಸ್ಥೆ ಕಂಡುಬಂದು ಪ್ರಯೋಗಕ್ಕೆ ಒಳಗಾಗಿ ಅತ್ಯುತ್ತಮ ಎಂದು ಅರಿವಾಗುವವರೆಗೂ ಪ್ರಜಾಪ್ರಭುತ್ವ ಆಳ್ವಿಕೆಯೇ ಉತ್ತಮ ಮಾರ್ಗ. ಈ ಮೂಲಕವೇ ಆಳಿಸಿಕೊಳ್ಳಬೇಕು. ಅನ್ಯ ದಾರಿಯೇ ಇಲ್ಲ. ಇದು ನಮ್ಮದೊಂದು ದೇಶದ ಕತೆಯಲ್ಲ. ವಿಶ್ವದ ಉದ್ದಗಲಕ್ಕೂ ಇದೇ ವ್ಯವಸ್ಥೆ ಇದೆ.
ರಾಜಕೀಯ ಪಕ್ಷಗಳ ಅಸ್ತಿತ್ವ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಮಾದರಿಯ ಪಕ್ಷ ವ್ಯವಸ್ಥೆ ಇರುತ್ತದೆ. ಅದರಲ್ಲಿ ಏಕಪಕ್ಷೀಯ, ದ್ವಿಪಕ್ಷೀಯ, ಬಹುಪಕ್ಷೀಯ ವ್ಯವಸ್ಥೆ ಇರುತ್ತದೆ. ಒಕ್ಕೂಟ ಸ್ವರೂಪದ ಸರ್ಕಾರ ಇರುವ ನಮ್ಮಲ್ಲಿ ಬಹುಪಕ್ಷೀಯ ವ್ಯವಸ್ಥೆ ಇದೆ. ಬಹುಪಕ್ಷಗಳ ಸರ್ಕಾರ ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅಮೆರಿಕಾ ಮತ್ತು ಇಂಗ್ಲೆಂಡ್‍ನಲ್ಲಿ ದ್ವಿಪಕ್ಷೀಯ ವ್ಯವಸ್ಥೆ ಇದೆ. ನಮ್ಮಲ್ಲಿ ರಾಷ್ಟ್ರಮಟ್ಟದ ಪಕ್ಷವಲ್ಲದೆ, ರಾಜ್ಯಮಟ್ಟದ ಪ್ರಾದೇಶಿಕ ಪಕ್ಷಗಳೂ ಇವೆ. ಕಳೆದೆರಡು ಬಾರಿಯಿಂದ ಕೇಂದ್ರದಲ್ಲಿ ಏಕಪಕ್ಷ ಬಹುಮತದ ಸರ್ಕಾರ ಇಲ್ಲವಾಗಿದೆ. ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ಕೊರತೆಯಿಲ್ಲ. ಮಾರ್ಚ್ 2014 ರ ಚುನಾವಣಾ ಆಯೋಗದಂತೆ 1627 ರಾಜಕೀಯ ಪಕ್ಷಗಳು ಮಾರ್ಚ್ 2014 ರಿಂದ ಜುಲೈ 2015ರವರೆಗೆ ಸುಮಾರು 239 ರಾಜಕೀಯ ಪಕ್ಷಗಳು ನೊಂದಾಯಿತವಾಗಿವೆ.
ಇಂದು ಪ್ರಜಾಪ್ರಭುತ್ವ ಉಳಿದಿದೆ ಎಂದರೆ ಅದು ತೆರಿಗೆ ಸಂಗ್ರಹದಿಂದ ಮಾತ್ರವಾಗಿದೆ. ತೆರಿಗೆ ಸಂಗ್ರಹದಿಂದ ಬರುವ ಆದಾಯವನ್ನು ಸರ್ವಜನರ ಹಿತಕ್ಕಾಗಿ ಬಳಸಲಾಗುತ್ತಿದೆ. ವಿಶೇಷವಾಗಿ ಅವಕಾಶ ವಂಚಿತರ ಸಬಲೀಕರಣಕ್ಕಾಗಿ ತೆರಿಗೆ ಹಣದಲ್ಲಿ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಆದರೆ ಕೆಲವೊಂದು ಪ್ರಕರಣದಲ್ಲಿ ರಾಜಕಾರಣಿಗಳ ಆಪ್ತ ಕೈಗಾರಿಕೋದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿರುವುದರಿಂದ ಮತ್ತು ಮಠಮಾನ್ಯಗಳಿಗೆ ತೆರಿಗೆ ಹಣದ ಬಹುಪಾಲನ್ನು ಹಂಚುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ.










