ಚಿಕ್ಕಮಗಳೂರು : ಕನ್ನಡ ಭಾಷೆ ಉಳಿಯಬೇಕಾದರೆ ರಾಜ್ಯ ಸರ್ಕಾರ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು : ಬಿ. ತಿಪ್ಪೇರುದ್ರಪ್ಪ.

157
firstsuddi

ಚಿಕ್ಕಮಗಳೂರು : ನಾಡಿನಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ರಾಜ್ಯ ಸರ್ಕಾರ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಸಾಹಿತಿ ಬಿ. ತಿಪ್ಪೇರುದ್ರಪ್ಪ ಸಲಹೆ ಮಾಡಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕ ಏರ್ಪಡಿಸಿದ್ದ ದಿ|| ಬೆಳಗೋಡು ಲೋಕಪ್ಪಗೌಡ. ದಿ|| ರಾಜು ಮತ್ತು ಜಾನಕಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಸಹಸ್ತ್ರಾರು ವರುಷಗಳ ಇತಿಹಾಸ ಹೊಂದಿದೆ. ಅದಕ್ಕೆ ತನ್ನದೇ ಆದ ಮಹತ್ವ ಮತ್ತು ಅಸ್ಮಿತೆ ಇದೆ. ಜಾಗತೀಕರಣ ಮತ್ತು ಆಧುನೀಕರಣದಿಂದಾಗಿ ಅದು ರಾಜ್ಯದಲ್ಲಿ ಕಣ್ಮರೆಯಾಗುತ್ತಿದೆ, ಇಂಗ್ಲೀಷ್ ಶಾಲೆಗಳ ಹಾವಳಿಯಿಂದಾಗಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ ಎಂದು ವಿಚಾರಿಸಿದರು.

ಇಂದು ಕನ್ನಡವನ್ನು ಬೋದಿಸುತ್ತಿರುವುದು ಸರ್ಕಾರಿ ಶಾಲೆಗಳು ಮಾತ್ರ. ಅವು ಉಳಿದರೆ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯುತ್ತದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಕನ್ನಡ ಭಾಷೆ ಇತಿಹಾಸ ಸೇರುತ್ತದೆ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ರಾಜ್ಯದಲ್ಲಿ ಕನ್ನಡ ಭಾಷೆ ಉಳಿದರೆ ಮಾತ್ರ ನಾಡಿನ ಸಂಸ್ಕೃತಿ ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.

ಕುವೆಂಪು ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ವಿಷಯ ಕುರಿತು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್. ಶಿಕ್ಷಣ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ತಕ್ಷ ಶಿಲೆ ಹಾಗೂ ನಳಂದದ ಪಾತ್ರ ಕುರಿತು ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿದರು.

ಇತ್ತೀಚೆಗೆ ನಿಧನರಾದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಚಂದ್ರಪ್ಪ ಅವರಿಗೆ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಎಂ.ಎನ್.ಷಡಕ್ಷರಿ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ ಎಂ ಮಂಜುನಾಥ ಸ್ವಾಮಿ. ಖಜಾಂಚಿ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್ ಸಂಘಟನಾ ಕಾರ್ಯದರ್ಶಿ ಕೆ.ಚಂದ್ರಯ್ಯ ಜಿಲ್ಲಾ ಸಂಚಾಲಕ ಎಂ.ಆರ್.ಪ್ರಕಾಶ್, ಎಂ.ಸಿ ಶಿವಾನಂದ ಸ್ವಾಮಿ, ರಘು, ದೀಪಕ್ ದೊಡ್ಡಯ್ಯ, ಪಿ.ಸಿ.ರಾಜೇಗೌಡ, ಬೆನೆಟಿಕ್ ಜೇಮ್ಸ್, ಉಪಸ್ಥಿತರಿದ್ದರು.