ಚಿಕ್ಕಮಗಳೂರು : ಕುವೆಂಪು ಅವರು ಕನ್ನಡ ಸಾರಸ್ವತ ಲೋಕದ ಸಾರ್ವಭೌಮ : ಕರಗುಂದ ರಾಮಣ್ಣ…

398

ಚಿಕ್ಕಮಗಳೂರು : ಇಂದಿನ ಯುವ ಜನತೆ ಹಿರಿಯರು, ಸಾಧಕರು, ಸಾಹಿತಿಗಳು ಮತ್ತು ಜ್ಞಾನಪೀಠ ಪುರಸ್ಕೃತರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು, ಅವರ ಬದುಕು-ಬರಹಗಳ ಅಧ್ಯಯನ ಮಾಡಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಚ್ಚೋಡಿ ಶ್ರೀನಿವಾಸ್ ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಆಯೋಜಿಸಿರುವ ಒಂದು ತಿಂಗಳ ಕಾಲದ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಕುರಿತ ಉಪನ್ಯಾಸ ಮಾಲಿಕೆಗೆ ನಗರದ ಜೆವಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೆನಪೇ ವರ್ಷದಿಂದ ವರ್ಷಕ್ಕೆ ಮಾಸುತ್ತಿದೆ, ಇಂತಹ ಬೆಳವಣಿಗೆ ಸಮಾಜಕ್ಕೆ ಮಾರಕ ಎಂದ ಅವರು ಈ ಹಿನ್ನೆಲೆಯಲ್ಲಿ ಜ್ಞಾನಪೀಠ ಪುರಸ್ಕøತರ, ಹಿರಿಯರ, ಸಾಧಕರು ಮತ್ತು ಸಾಹಿತಿಗಳ ಬದುಕು-ಬರಹ ನಮಗೆ ದಾರಿ ದೀಪವಾಗಬೇಕು ಎಂದರು.
ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯದಮೇರು ಅವರಿಗೆ ಸರಿ ಸಮಾನವಾದವರು ಇದುವರೆಗೂ ಕಂಡಿಲ್ಲ ಮುಂದೆಯೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕರಗುಂದ ರಾಮಣ್ಣ ಕುವೆಂಪು ಅವರು ಸಾಹಿತ್ಯ ಕ್ಷೇತ್ರದ ದಿಗ್ಗಜ. ಕನ್ನಡ ಸಾರಸ್ವತ ಲೋಕದ ಸಾರ್ವಭೌಮ ಎಂದರು.
ನಿಸರ್ಗವೇ ಸ್ವರ್ಗ ಎಂದು ಪ್ರತಿಪಾದಿಸಿದ ನಿಸರ್ಗ ಕವಿ ರಾಷ್ಟ್ರಕವಿ ಕುವೆಂಪು, ಅವರು ಮಹಾಕಾವ್ಯ, ಖಂಡಕಾವ್ಯ, ಶಿಶುಸಾಹಿತ್ಯ ಸೇರಿದಂತೆ ಅನೇಕ ಪ್ರಾಕಾರಗಳಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ, ಅವರ ಒದೊಂದು ಕೃತಿಗಳೂ ಅಧ್ಯಯನಕ್ಕೆ ಅರ್ಹವಾದವು ಎಂದು ಹೇಳಿದರು.
ಕುವೆಂಪು ಅವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಅಗ್ರಮಾನ್ಯ ಸಾಹಿತಿ. 20ನೇ ಶತಮಾನವನ್ನು 70 ವರ್ಷಗಳ ಕಾಲ ಸಾಹಿತ್ಯದ ತಪಸ್ಸು ಮಾಡಿರುವ ಕುವೆಂಪು ಅವರ ಯುಗ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಜ್ಞಾನಪೀಠ ಪುರಸ್ಕøತರ ಬದುಕು-ಬರಹದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪನ್ಯಾಸ ಮಾಲಿಕೆಯಡಿ ಜಿಲ್ಲೆಯ ವಿವಿಧೆಡೆ ಒಂದು ತಿಂಗಳ ಕಾಲ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಕುರಿತು ಉಪನ್ಯಾಸ, ಕವಿ ಕಾವ್ಯಗಾಯನ ಹಾಗೂ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಸಮಾರಂಭದ ನಡುವೆ ಗಾಯಕ ಹೆಚ್.ಎಲ್.ವಿಶ್ವನಾಥ್ ಅವರಿಂದ ರಾಷ್ಟ್ರಕವಿ ಕುವೆಂಪು ವಿರಚಿತ ಗೀತೆಗಳ ಗಾಯನ ನಡೆಯಿತು, ರಸಪ್ರಶ್ನೆ ಕಾರ್ಯಕ್ರಮ ಜರುಗಿತು.
ಜಿಲ್ಲಾ ಒಕ್ಕಲಿಗರ ಸಂಸದ ಉಪಾಧ್ಯಕ್ಷ ಟಿ.ರಾಜಶೇಖರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಕ್ರಿಸ್ಟೋಫರ್ ಕೋಟ್ಯಾನ್, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಳ್ಳೇಗೌಡ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿದರು, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ ಸ್ವಾಗತಿಸಿದರು, ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ ವಂದಿಸಿದರು.