ಚಿಕ್ಕಮಗಳೂರು:- ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿರುವುದರಿಂದ ಅಂಬೇಡ್ಕರ್ ಮತ್ತು ಸಂವಿಧಾನದ ಆಶಯದಂತೆ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಶೇ 50 ಕ್ಕೆ ಹೆಚ್ಚಿಸಬೇಕು ಎಂದು ಬಿ ಎಸ್ ಪಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಒತ್ತಾಯಿಸಿದರು.
ಜಿಲ್ಲಾ ಸಹೋದರತ್ವ ಸಮಿತಿ ಮತ್ತು ಮಹಿಳಾ ಸಂಘ ನಗರದ ಬಿಎಸ್ ಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ವರ್ಷಗಳ ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದರು ಆದರೆ ಇಂದು ಪುರುಷರಿಗೆ ಸರಿ ಸಮಾನವಾಗಿ ಶಿಕ್ಷಣವಂತರಾಗುವುದರ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾರೆ ಮೀಸಲಾತಿ ಹೆಚ್ಚಳವಾದರೆ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ ಎಂದರು.
ಹೆಣ್ಣು ಸಮಾಜದ ಕಣ್ಣು, ಹೆಣ್ಣು ಹುಟ್ಟಿನ ಸಂಕೇತವಾಗಿರುವುದರಿಂದ ಅವಳಿಲ್ಲದೆ ಸಮಾಜವಿಲ್ಲ ಹಾಗಾಗಿ ಸಮಾಜ ಹೆಣ್ಣಿಗೆ ಗೌರವ ನೀಡುವುದನ್ನು ಕಲಿಯಬೇಕು ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮಹಿಳೆಯರ ನೋವಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ ಬಿ ಸುಧಾ ಮಹಿಳೆಯರು ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಬಾರದು ಅದರಿಂದ ಹೊರಬಂದು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಬೆಳೆಯಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಸಹೋದರತ್ವ ಸಮಿತಿ ಕಳೆದ ಎಂಟು ವರ್ಷಗಳಿಂದ ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಅವರನ್ನು ಸದೃಢಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಬಿ ಎಸ್ ಪಿ ವಿಧಾನಸಭಾ ಸಮಿತಿ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿದರು ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಸಹೋದರತ್ವ ಸಮಿತಿಯ ಉಪಾಧ್ಯಕ್ಷೆ ಕೆ ಎಸ್ ಮಂಜುಳ, ಕಚೇರಿ ಕಾರ್ಯದರ್ಶಿ ಕಲಾವತಿ, ಬಿಎಸ್ ಪಿ ನಗರಧ್ಯಕ್ಷ ವಿಜಯಕುಮಾರ್, ನವೀನ್, ಕುಮಾರಿ, ಗೀತಾ, ಅಸ್ಮಾ, ಪರ್ವೀನ್, ರೇಖಾ ಉಪಸ್ಥಿತರಿದ್ದರು.










