ಚಿಕ್ಕಮಗಳೂರು : ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಾದ ಸರ್ಕಾರಿ ಆಸ್ಪತ್ರೆ ಸಿಬ್ಬಂಧಿಗಳೇ ನಿಯಮವನ್ನು ಪಾಲಿಸದೆ ಮೋಜು ಮಸ್ತಿ…!

608
firstsuddi

ಚಿಕ್ಕಮಗಳೂರು :- ಕೋವಿಡ್ ಕಷ್ಟಕಾಲದಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಸ್ಪತ್ರೆಯ ಸಿಬ್ಬಂದಿಯೇ ಕರ್ತವ್ಯ ನಿರ್ಲಕ್ಷ್ಯತೆ ವಹಿಸಿದ ಘಟನೆ ವರದಿಯಗಿದೆ.
ಕೊರೋನಾ ಕಾಲದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಕೇಂದ್ರ, ರಾಜ್ಯ ಸರ್ಕಾರಗಳು, ಅಧಿಕಾರಿಗಳು, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೋವಿಡ್ ನಿಯಂತ್ರಿಸಲು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಎರಡೇ ಮಾರ್ಗ ಎಂದು ಸಾರಿ ಸಾರಿ ಹೇಳಲಾಗುತ್ತಿದೆ. ಅದಕ್ಕಾಗಿ ಸರ್ಕಾರಗಳು ಲಾಕ್‍ಡೌನ್ ಕೂಡ ಮಾಡಿದ್ದಾರೆ.
ಜನರು ಎಲ್ಲೂ ತಿರುಗಾಡುವಂತಿಲ್ಲ, ತಿರುಗಾಡಿದರೆ, ಪೊಲೀಸರ ಕೈಗೆ ಸಿಕ್ಕಿಕೊಂಡರೆ ಮಾಸ್ಕ್ ಧರಿಸಿರಬೇಕು. ಇಲ್ಲದಿದ್ದರೆ ಪೊಲೀಸರಿಂದ ಏಟು ತಿನ್ನಬೇಕಾಗುತ್ತದೆ.
ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜೀವ ಉಳಿದರೆ ಸಾಕಪ್ಪ ಎಂದು ಜನರು ಬಾಗಿಲು ಮುಚ್ಚಿ ಮನೆಯಲ್ಲೇ ಕುಳಿತಿದ್ದಾರೆ.
ಜನರಿಗೆ ಎಲ್ಲವನ್ನು ಹೇಳಿಕೊಟ್ಟು ಜಾಗೃತಿ ಮೂಡಿಸುವ ಸರ್ಕಾರದ ಅಧಿಕಾರಿಗಳೇ ಈಗ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೋಜು ಮಸ್ತಿ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪ ತಾಲ್ಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸದಾ ರೋಗಿಗಳಿಂದ ತುಂಬಿರುವ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಪದೇಪದೇ ಹುಟ್ಟುಹಬ್ಬ ಆಚರಣೆ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಿದ್ದಾರೆ.
ಇದಷ್ಟೇ ಅಲ್ಲ, ಇಲ್ಲಿ ಬರೀ ಸಿಬ್ಬಂದಿಗಳು ಮಾತ್ರವಲ್ಲ ಆಡಳಿತ ವೈದ್ಯಾಧಿಕಾರಿ ನೇತೃತ್ವದಲ್ಲೇ ಹುಟ್ಟುಹಬ್ಬ ಆಚರಣೆ ನಡೆಸಲಾಗುತ್ತಿದೆ.
ಕಳೆದ ಒಂದು ತಿಂಗಳಿನಲ್ಲಿ 2-3 ಸಿಬ್ಬಂದಿಗಳ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲಿ ಆಚರಿಸಲಾಗಿದೆ. ಸದಾ ರೋಗಿಗಳಿಂದ ತುಂಬಿರುವ ಆಸ್ಪತ್ರೆಯಲ್ಲಿ ಬಿಡುವಿನ ವೇಳೆಯಲ್ಲಿ ಈ ರೀತಿ ಮಾಡಿದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ, ಕೆಲವು ದಾದಿಯರು, ಆರೋಗ್ಯ ಸಹಾಯಕರು, ಡಿ ಗ್ರೂಪ್ ನೌಕರರು, ವ್ಯೆದ್ಯರು ಸೇರಿದಂತೆ ಸುಮಾರ 30ಕ್ಕೂ ಹೆಚ್ಚು ಸಿಬ್ಬಂದಿ ಒಟ್ಟಿಗೆ ಒಂದೇ ಕೊಠಡಿಯಲ್ಲಿ ಮಾಸ್ಕ್‍ಗಳನ್ನೂ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹುಟ್ಟುಹಬ್ಬ ಆಚರಿಸಿ ಬೇಜವಾಬ್ದಾರಿ ಮೆರೆದಿದ್ದಾರೆ.
ಸರ್ಕಾರದ ಸಂಬಳ ಪಡೆದು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಸಿಬ್ಬಂದಿ ಕೋವಿಡ್ ನಿಯಂತ್ರಣಗಳನ್ನು ಗಾಳಿಗೆ ತೂರಿದ್ದಾರೆ. ಇಡೀ ಆಸ್ಪತ್ರೆ ಸಿಬ್ಬಂದಿಯನ್ನು ಗೌರವದಿಂದ ಹಾಗೂ ಜವಾಬ್ದಾರಿಯಿಂದ ಕೊರೋನಾ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಡೆದುಕೊಳ್ಳುವಂತೆ ಮಾಡಬೇಕಾದ ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ ನೇತೃತ್ವದಲ್ಲೇ ಈ ರೀತಿ ಕೋವಿಡ್ ನಿಯಮಗಳನ್ನು ಪಾಲಿಸದೇ “ಹಬ್ಬ” ಮಾಡಿರುವುದು ಅಕ್ಷಮ್ಯವಾಗಿದೆ.
ಡಾ.ಗಾನವಿ ಕೆಲವು ತಿಂಗಳುಗಳಿಂದ ಇಲ್ಲಿನ ಆಡಳಿತ ವೈದ್ಯಾಧಿಕಾರಿಯಾಗಿದ್ದು, ಆಸ್ಪತ್ರೆಯ ಆಡಳಿತ ಹಳಿ ತಪ್ಪಿರುವುದಕ್ಕೆ ಇದು ಉದಾಹರಣೆಯಾಗಿದೆ.
ಅದೂ ಅಲ್ಲದೇ ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯರೊಬ್ಬರು ಪ್ರತೀ ಶುಕ್ರವಾರ ಮಂಗಳೂರಿಗೆ ತೆರಳುತ್ತಾರೆ. ಕೊರೋನಾ ಆತಂಕದಲ್ಲಿ ಜನರಿದ್ದು, ಜಿಲ್ಲೆಗೆ ಕೊರೋನಾ ಕಾಲಿಡದಿರಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಗಡಿ ಕಾಯುತ್ತಿದ್ದಾರೆ.
ವೈದ್ಯರು, ದಾದಿಯರು ದೇವರು ಸಮಾನ ಎಂದು ಸಾರ್ವಜನಿಕರು ಲಾಕ್‍ಡೌನ್ ಕಾಲದ ಕಷ್ಟಗಳನ್ನು ಹೊಟ್ಟೆಗೆ ಹಾಕಿಕೊಂಡು ದಾದಿಯರ ಮತ್ತು ವೈದ್ಯರ ಸೇವೆಗೆ ಸಾಥ್ ನೀಡುತ್ತಿದ್ದಾರೆ. ಆದರೆ, ಇವರುಗಳು ಆಸ್ಪತ್ರೆಯ ಕೊಠಡಿಯಲ್ಲೇ ಬರ್ತ್‍ಡೇ ಆಚರಣೆ ಮಾಡುತ್ತಾರೆ.
ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂದೆಲ್ಲಾ ಬುದ್ಧಿ ಹೇಳಬೇಕಾದವರು ಈ ರೀತಿ ವರ್ತಿಸಿದರೆ ಅದಕ್ಕೆ ಜಿಲ್ಲಾಡಳಿತ ಕ್ರಮ ಜರುಗಿಸದಿದ್ದರೆ ಅದು ತಪ್ಪು ಸಂದೇಶ ಹೋಗುತ್ತದೆ. ಲಾಕ್ ಡೌನ್‍ನಿಂದ ಜನರು ಕೂಲಿ ಕೆಲಸವೂ ಸಿಕ್ಕದೇ ಹೊಟ್ಟೆ ಪಾಡಿಗಾಗಿ ಕೈ ಚಾಚುವ ಪರಿಸ್ಥಿತಿ ಬಂದಿದೆ. ಆದರೆ, ಕೊಪ್ಪ ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ ಯವರ ಅನುಭವದ ಕೊರತೆ ಮತ್ತು ಬೇಜವಾಬ್ದಾರಿತನದಿಂದ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಜಿಲ್ಲಾಧಿಕಾರಿ ಮತ್ತು ರಾಜ್ಯ-ಕೇಂದ್ರ ಸರ್ಕಾರಗಳ ನಿಷೇಧಾಜ್ಞೆಯನ್ನು ನಿರ್ಲಕ್ಷಿಸಿ, ಸರ್ಕಾರದ ಆದೇಶದ ಹಾಗೂ ಈಗಿನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೇ ಸಿಬ್ಬಂದಿ ಜೊತೆ ಸೇರಿ ಬರ್ತ್ ಡೇ ಪಾರ್ಟಿ ಮಾಡಿರುವುದು ಅಕ್ಷಮ್ಯವಾಗಿದ್ದು, ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡು ಆಡಳಿತ ವೈದ್ಯಾಧಿಕಾರಿಗೆ ನೋಟೀಸ್ ಜಾರಿಗೊಳಿಸಿದೆ.
ಮೊದಲೇ ಕೊಪ್ಪ ಆಸ್ಪತ್ರೆಯ ಕೆಲವು ಸಿಬ್ಬಂದಿ ಹಾಗೂ ರಾಜಕೀಯಕ್ಕೆ ತುಂಬಾ ನಂಟಿದೆ. ಆದುದ್ದರಿಂದ ಶಾಸಕರಾದ ಟಿ.ಡಿ.ರಾಜೇಗೌಡರು ಇಂತಹವರ ನೆರವಿಗೆ ನಿಲ್ಲುತ್ತಾರ ಅಥವಾ ಜಿಲ್ಲಾಡಳಿತ ಕ್ರಮವನ್ನು ಬೆಂಬಲಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ರವರ ಮೇಲೆ ಕೆಲವು ಸ್ಥಳೀಯರ ಮೂಲಕ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದ್ದು, ಡಾ.ಗಾನವಿ ರವರ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಬಗ್ಗೆ ಮೃದು ಧೋರಣೆ ಅನುಸರಿಸಲು ಸ್ಥಳೀಯ ಕೆಲವು ರಾಜಕಾರಣಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಅಂತಹುದರಲ್ಲಿ ಕೊಪ್ಪ ಆಸ್ಪತ್ರೆಯ ವೈದ್ಯರೊಬ್ಬರು ಕೊರೋನಾ ವಾರಿಯರ್ಸ್ ಎಂದು ಕರೆಯಿಸಿಕೊಂಡು ಶುಕ್ರವಾರ ಮಂಗಳೂರಿಗೆ ತೆರಳುತ್ತಾರೆ ಮತ್ತೆ ಅವರು ಬರುವುದೇ ಸೋಮವಾರ!
ಈಗ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ರಜೆ ನೀಡುವಂತಿಲ್ಲ. ಅವರು ಕೇಂದ್ರ ಸ್ಥಾನದಲ್ಲೇ 24 ಗಂಟೆಗಳ ಕಾಲ ಲಭ್ಯವಿರಬೇಕು. ಆದರೆ, ಈ ವೈದ್ಯ ಉಡುಪಿ ಮಾರ್ಗವಾಗಿ ಮಂಗಳೂರಿಗೆ ಕೊರೋನಾ ಸಂದರ್ಭದಲ್ಲೇ ಕಳೆದ ಮೂವತ್ತು ದಿನಗಳಲ್ಲಿ 2-3 ಬಾರಿ ಹೋಗಿ ಬಂದಿದ್ದಾರೆ. ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆ ಕೇರಳದ ಗಡಿ ಪ್ರದೇಶ. ಅದೂ ಅಲ್ಲದೇ ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಂತಹುದರಲ್ಲಿ ಇವರು ಕೊಪ್ಪ ಕೇಂದ್ರ ಸ್ಥಾನ ಬಿಟ್ಟು ಹೋಗಿ ಬಂದಿದ್ದಾರೆ. ಇವರಿಗೆ ಈಗ ಗಡಿ ಪ್ರದೇಶದ ಪೊಲೀಸರು ಮಂಗಳೂರು ಕಡೆಗೆ ಪ್ರಯಾಣಿಸಲು ಒಪ್ಪದೇ ಇದ್ದುದ್ದರಿಂದ ಇವರು ಆಸ್ಪತ್ರೆಯ ಒಂದು ಕೋಠಡಿಯಲ್ಲೇ ಉಳಿದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ನಮ್ಮ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಉಡುಪಿಗೆ ಹೋಗಿ ಬಂದರೆ ಅವರಿಗೆ ಕ್ವಾರಂಟೈನ್‍ಗೆ ಕಳುಹಿಸಬೇಕು. ಆದರೆ ಇದೆಲ್ಲಾ ಇಲ್ಲಿ ಆಗಿಲ್ಲ. ಇದರ ಬಗ್ಗೆ ಜಿಲ್ಲಾ ಡಳಿತ ಸಮಗ್ರವಾದ ತನಿಖೆ ನಡೆಸಬೇಕಾಗಿದೆ.