ಚಿಕ್ಕಮಗಳೂರು : ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು- ರವಿಕುಮಾರ್.

334
firstsuddi

ಚಿಕ್ಕಮಗಳೂರು : ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಅವರು ಮನವಿ ಮಾಡಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ಫಿಟ್ ಇಂಡಿಯಾ ಸಪ್ತಾಹ ಮತ್ತು ಸೇವಾದಳ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊರೋನಾ ಸೋಂಕಿನಿಂದ ಪಾರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸಬೇಕು, ಪ್ರತಿದಿನ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು, ಬೀದಿ ಬದಿಯ ತಿಂಡಿಯನ್ನು ಬಿಟ್ಟು ಉತ್ತಮ ಆಹಾರವನ್ನು ಸೇವಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಅವರು ಮಾತನಾಡಿ ಮಕ್ಕಳು ಉತ್ತಮ ನಾಗರೀಕರಾಗಬೇಕಾದರೆ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಭಾರತ ಸೇವಾದಳವನ್ನು ಸೇರಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ. ಲೋಕೇಶ್ವರಾಚಾರ್ ಅವರು ಸಪ್ತಾಹದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಫಿಟ್ ಇಂಡಿಯಾ ಸಪ್ತಾಹ ಮತ್ತು ಸೇವಾದಳ ಸಪ್ತಾಹದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಸೇವಾದಳಕ್ಕೆ ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಗಿರೀಶ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶಪ್ಪ, ಶಿಕ್ಷಕರಾದ ನಾಗವೇಣಿ, ಜಯಂತಿ ಉಪಸ್ಥಿತರಿದ್ದರು.