ಚಿಕ್ಕಮಗಳೂರು: ಗಮಕ ಕನ್ನಡ ನಾಡಿನ ವಿಶಿಷ್ಟ ಕಲೆ, ಸಾಹಿತ್ಯ ಮತ್ತು ಸಂಗೀತದ ಸಹಚರ್ಯವೇ ಗಮಕ : ಡಾ|ಬೆಳವಾಡಿ ಮಂಜುನಾಥ್.

212
First suddi

ಚಿಕ್ಕಮಗಳೂರು: ಗಮಕ ಕಾವ್ಯವನ್ನು ಸುಶ್ರ್ಯಾವ್ಯವಾಗಿ ಸಂವಹನಗೊಳಿಸುವ ಪರಿಣಾಮಕಾರಿ ಮಾಧ್ಯಮ ಎಂದು ಸಾಹಿತಿ ಡಾ|ಬೆಳವಾಡಿ ಮಂಜುನಾಥ್ ಹೇಳಿದರು.
ಜಿಲ್ಲಾ ಕಸಾಪ ನಗರದ ಸಾಯಿಏಂಜಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಬಿ.ಎ.ಲೀಲಮ್ಮ ಲೋಕಪ್ಪಗೌಡ ಹಾಗೂ ಎಂ.ಕೆ. ಶ್ರೀನಿವಾಸ ಶ್ರೇಷ್ಠಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಳೆಗನ್ನಡ ಅರ್ಥೈಸುವಲ್ಲಿ ಗಮಕದ ಪಾತ್ರ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಗಮಕ ಕನ್ನಡ ನಾಡಿನ ವಿಶಿಷ್ಟ ಕಲೆ, ಸಾಹಿತ್ಯ ಮತ್ತು ಸಂಗೀತದ ಸಹಚರ್ಯವೇ ಗಮಕ. ಕಾವ್ಯಗಳ ವಿವಿಧ ಪಂಥೋ ಶೈಲಿಯ ಜಾಡನ್ನು ಹಿಡಿದು ಅದಕ್ಕೆ ಪೂರಕವಾದ ರಾಗ ಸಂಯೋಜಿಸಿ ರಸವತ್ತಾಗಿ ವಾಚಿಸುವ ಗಮಕ ಕಲೆ ಅತ್ಯಂತ ಪ್ರಾಚೀನವಾದದ್ದು ಎಂದರು.
ಹಿಂದೆ ರಾಜ ಮಹಾರಾಜರ ಆಸ್ಥಾನದಲ್ಲಿ ಕವಿಗಳು ಆಶ್ರಯ ಪಡೆದಂತೆ ಗಮಕಿಗಳೂ ಪೋಷಿಸ್ಪಟ್ಟಿದ್ದರು. ಕವಿ ಕುಮಾರವ್ಯಾಸನ ಗದುಗಿನ ಭಾರತ, ಜೈಮಿನಿಭಾರತ, ಹರಿಶ್ಚಂದ್ರ ಕಾವ್ಯಗಳು ಜನಪ್ರೀಯವಾದದ್ದು ಗಮಕದಿಂದಲೇ ಎಂದರು.
ಕುವೆಂಪು ಸಾಹಿತ್ಯದಲ್ಲಿ ಮಲೆನಾಡಿನ ಬದುಕಿನ ಚಿತ್ರಣ ವಿಷಯ ಕುರಿತು ಉಪನ್ಯಾಸ ನೀಡಿದ ಐಡಿಎಸ್‍ಜಿ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ|ಎಚ್.ಎಂ. ಮಹೇಶ್, ಮಲೆನಾಡಿನ ಮಹಾಕಾವ್ಯದಂತಿರುವ ಕುವೆಂಪು ಅವರ ಕಾದಂಬರಿಗಳು ನಗರದ ನಾಗರೀಕತೆ ಸೋಂಕದ ಶ್ರೀಮಂತ ಸಂಸ್ಕøತಿಯ ಮಹತ್ವದ ದಾಖಲೆಗಳಾಗಿವೆ ಎಂದು ಹೇಳಿದರು.
ಕುವೆಂಪು ಕಂಡ ಮಲೆನಾಡು ದಟ್ಟ ಕಾಡಿನ ನಾಡು. ಇಲ್ಲಿ ಯಾರೂ ಮುಖ್ಯರಲ್ಲ ಅಥವಾ ಅಮುಖ್ಯರಲ್ಲ ಎನ್ನುವ ಕುವೆಂಪು ಅಲ್ಲಿನ ಜನರ ರೀತಿ ನೀತಿ ಪ್ರೀತಿ ಎಲ್ಲವನ್ನೂ ಕಲಾತ್ಮಕವಾಗಿ ಚಿತ್ರಿಸುವ ಮೂಲಕ ತಮ್ಮ ಸಾಹಿತ್ಯದಲ್ಲಿ ಅದ್ಭುತ ಲೋಕದ ದರ್ಶನ ಮಾಡಿಸಿದ್ದಾರೆ ಎಂದರು.
ವಿಶ್ವಮಾನವ ಸಂದೇಶವನ್ನು ಸಾಕಾರಗೊಳಿಸಲು ಸಾಹಿತ್ಯವನ್ನು ಒಂದು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ರಸಋಷಿ ಕುವೆಂಪು ವೈಜ್ಞಾನಿಕ ಮತ್ತು ವೈಚಾರಿಕ ತಳಹದಿಯ ಮೇಲೆ ಸಂಸ್ಕøತಿಯ ವಿಶ್ಲೇಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಲ್.ರಾಮದಾಸ್ ಮಕ್ಕಳು ಎಷ್ಟೇ ದೊಡ್ಡವರಾದರೂ ಶ್ರೀಮಂತಿಕೆ, ಅಧಿಕಾರ, ಅಂತಸ್ತು ಹೊಂದಿದ್ದರೂ ಸಹ ಅವರು ತಮ್ಮ ತಾಯಿಗೆ ಋಣಿಯಾಗಿರಬೇಕು ಹೆತ್ತವರಿಗೆ ವಿಧೇಯರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ರಾಷ್ಟ್ರಕವಿ ಕುವೆಂಪು ಅವರು ಕುಪ್ಪಳ್ಳಿಯಲ್ಲೇ ಕುಳಿತು ಕನ್ನಡ ಪ್ರಜ್ಞೆ ಮತ್ತು ವಿಶ್ವಪ್ರಜ್ಞೆಯನ್ನು ತಮ್ಮ ಸಾಹಿತ್ಯದ ಮೂಲಕ ಮೂಡಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಸರ್ವೋದಯ ಸಮಾಜದ ತುಡಿತವಿದೆ ಎಂದು ತಿಳಿಸಿದರು.
ದತ್ತಿದಾನಿ ಸತ್ಯಪಾಲ್, ಕಾಲೇಜಿನ ಪ್ರಾಚಾರ್ಯ ಕೆ.ಕೆ.ನಾಗರಾಜ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಖಜಾಂಚಿ ಪ್ರೋ.ಕೆ.ಎನ್.ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.