ಚಿಕ್ಕಮಗಳೂರು : ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಭಾರತ ಸೇವಾದಳದ ಜಿಲ್ಲಾ ಘಟಕ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ…

217
firstsuddi

ಚಿಕ್ಕಮಗಳೂರು : ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಭಾರತ ಸೇವಾದಳದ ಜಿಲ್ಲಾ ಘಟಕ ಇಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿತು.
ನಗರದ ಸೇವಾದಳದ ಕಛೇರಿಯಲ್ಲಿ ಪದಾಧಿಕಾರಿಗಳು ಸಾಮೂಹಿಕವಾಗಿ ಕ್ಯಾಂಡಲ್‍ಗಳನ್ನು ಬೆಳಗುವುದರ ಜೊತೆಗೆ ಪುಷ್ಪ ನಮನ ಸಲ್ಲಿಸಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾ ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ನಿಟ್ಟಿನಲ್ಲಿ ದೇಶದ ಜನತೆ ಸ್ವಯಂ ಪ್ರೇರಿತರಾಗಿ ಆ ದೇಶದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದರು.
ಸೈನಿಕರಿದ್ದರೆ ನಾವು, ಯೋಧರು ಮನೆ ಮಠ ಬಿಟ್ಟು ಗಡಿಯಲ್ಲಿ ಪ್ರತಿಕ್ಷಣ ಸಾವನ್ನು ಎದುರಿಸುತ್ತಾ ಕಾಯುತ್ತಿರುವುದರಿಂದಾಗಿ ನಾವು ಸುರಕ್ಷಿತವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ, ಅವರ ಬೆಂಬಲಕ್ಕೆ ನಿಲ್ಲುವುದು ದೇಶದ ಜನತೆಯ ಜವಾಬ್ದಾರಿ ಹಾಗಾಗಿ ಚೀನೀ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ನಾವು ನಮ್ಮ ಸೈನಿಕರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ಮಾಡಿದರು.
ಇದೇ ವೇಳೆ ಸೇವಾದಳದ ವತಿಯಿಂದ ಸಾರ್ವಜನಿಕರು ಮತ್ತು ಕ್ರೀಡಾಪಟುಗಳಿಗೆ ಮಾಸ್ಕ್‍ಗಳನ್ನು ವಿತರಿಸಲಾಯಿತು, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್, ಶಿಕ್ಷಕ ರಮೇಶ್, ಕ್ರೀಡಾ ತರಬೇತುದಾರ ಕೋಟೆ ಶಂಕರ್ ಹಾಜರಿದ್ದರು.