ಚಿಕ್ಕಮಗಳೂರು : ಜಾನಪದ ಗೀತೆಗಳು ಮನಸ್ಸಿಗೆ ಉಲ್ಲಾಸ ನೀಡುವುದರ ಜೊತೆಗೆ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತವೆ : ಡಿ.ಎಸ್.ಸುರೇಶ್.

455
firstsuddi

ಚಿಕ್ಕಮಗಳೂರು : ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸುವ ಕೆಲಸವಾಗಬೇಕು ಎಂದು ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಸಲಹೆ ಮಾಡಿದರು.
ತರೀಕೆರೆಯ ಮಾನಸ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇತ್ತೀಚಿಗೆ ಏರ್ಪಡಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಗೀತೆಗಳು ಅರ್ಥ ಪೂರ್ಣವಾಗಿದೆ ಮನಸ್ಸಿಗೆ ಉಲ್ಲಾಸ ನೀಡುವುದರ ಜೊತೆಗೆ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತವೆ ಎಂದ ಅವರು ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಹೊರಬಂದು ಜಾನಪದದ ಬಗ್ಗೆ ಅಸಕ್ತಿ ತಳೆದರೆ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಜಾನಪದ ನಮ್ಮ ಹಿರಿಯರ ಅನುಭವದಿಂದ ಅರಳಿದ ಸಾಹಿತ್ಯ ಅದು ನಮ್ಮ ಸಂಸ್ಕೃತಿಯ ತಾಯಿಬೇರು ಅದನ್ನು ಉಳಿಸುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದೆ ಎಂದು ಹೇಳಿದರು.
ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ ಮನುಷ್ಯನ ಉದಯದ ದಿನದಿಂದಲೇ ಜಾನಪದ ಸಾಹಿತ್ಯ ಹುಟ್ಟಿದೆ. ಜಾನಪದವೇ ಮನುಷ್ಯನ ಬದುಕು ಅದಕ್ಕೆ ಅದಿಯಿದೆ ಅಂತ್ಯವಿಲ್ಲ ಎಂದರು.
ಇದೇ ವೇಳೆ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ನೂತನ ಪದಾಧೀಕಾರಿಗಳ ಪದಗ್ರಹಣ ನಡೆಯಿತು. ಜಾನಪದದ ಹಿರಿಯ ಕಲಾವಿದರಾದ ಮುಗುಳಿ ಲಕ್ಷ್ಮೀ ದೇವಮ್ಮ, ಮಾಳೇನಹಳ್ಳಿ ಬಸಪ್ಪ ಮತ್ತು ಜಿ.ಟಿ.ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಮಲೆನಾಡು ವಿಧ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ ಮಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ತಾಲೂಕು ಗೌರವಾಧ್ಯಕ್ಷ ಹೆಚ್.ಚಂದ್ರಪ್ಪ, ತಾಲೂಕು ಅಧ್ಯಕ್ಷ ಕೆ.ಎಂ ಹರೀಶ್, ಬಿ.ಎಸ್.ಭಗವಾನ್, ತಾಲೂಕು ಕಸಾಪ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಕಾಲೇಜಿನ ಪ್ರಾಂಶುಪಾಲೆ ನಾಗಮಣಿ ಉಪಸ್ಥಿತರಿದ್ದರು.