ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೋಭಾ ವಿರೋಧಿ ಅಲೆ ಜಾಸ್ತಿ – ಪ್ರಮೋದ್‌ ಮಧ್ವರಾಜ್‌ 

347

ಚಿಕ್ಕಮಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೋದಿ ಅಲೆ ನಡುವೆ ಶೋಭಾ ಕರಂದ್ಲಾಜೆ ಅವರ ವಿರೋಧಿ ಅಲೆ ಜೋರಾಗಿ ಬೀಸಿ ದಂತೆ ಅನಿಸುತ್ತಿದೆ. ಬಿಜೆಪಿಯ ಕೆಲ ಅತೃಪ್ತರು ನಮಗೆ ಸಹಕರಿಸಿರುವ ಮಾಹಿತಿ ಇದೆ’ ಎಂದು ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಇಲ್ಲಿ ಶನಿವಾರ ಹೇಳಿದರು.

‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೋಭಾ ವಿರುದ್ಧ ಅಲೆ ಹೆಚ್ಚು ಇತ್ತು ಅನಿಸುತ್ತಿದೆ. ಈ ಚುನಾವಣೆ ಮೋದಿ ಅಲೆ ವರ್ಸಸ್‌ ಮೋದಿ ಸರ್ಕಾರದಿಂದ ತೊಂದರೆಗೊಳಾದವರು ಎಂಬಂತಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.‘ನಾಲ್ಕು ಪಕ್ಷಗಳ ಬೆಂಬಲ ನನಗೆ ದೊರೆತಿದೆ. ಮತದಾರರ ಮನಸ್ಸನ್ನು ತಿಳಿದುಕೊಳ್ಳುವುದು ಕಷ್ಟ. ಎಷ್ಟು ಮತಗಳನ್ನು ಪಡೆಯುತ್ತೇನೆ ಹೇಳಲಾಗದು. ಈ ಕ್ಷೇತ್ರದ ಮತದಾರರು ಹೊಸಮುಖ ಪರಿಚಯಿಸುತ್ತಾರೆ ಎಂಬ ನಿರೀಕ್ಷೆ ಇದೆ’ ಎಂದು ಉತ್ತರಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಆಸಕ್ತಿ ಅತಿ ಕಡಿಮೆ ಇರುತ್ತದೆ. ಮೂರು ಪಕ್ಷಗಳ ಕಾರ್ಯಕರ್ತರ ಸಮನ್ವಯ ಕೊಂಚ ಕಡಿಮೆಯಾಗಿರಬಹುದು. ಮೈತ್ರಿಯಲ್ಲಿ ಭಿನ್ನಾಭಿಪ್ರಾಯ, ಗೊಂದಲವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.ಶಾಂತರೀತಿಯಲ್ಲಿ ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆದಿದೆ. ಫಲಿತಾಂಶಕ್ಕೆ ಇನ್ನು ಐದು ದಿನ ಬಾಕಿ. ಎಲ್ಲರ ಚಿತ್ತ ಅತ್ತ ಹರಿದಿದೆ. ಮೈತ್ರಿ ಪಕ್ಷಗಳ ವರಿಷ್ಠರು, ಮುಖಂಡರು, ಕಾರ್ಯಕರ್ತರು ಎಲ್ಲರೂ ಪ್ರಚಾರದಲ್ಲಿ ತೊಡಗಿಸಿಕೊಂಡು ಚೆನ್ನಾಗಿ ಕೆಲಸ ಮಾಡಿದರು’ ಎಂದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಎಂ.ರೇಣುಕಾರಾಧ್ಯ, ಕಾಂ‌ಗ್ರೆಸ್‌ ಜಿಲ್ಲಾ ವಕ್ತಾರ ಶಿವಾನಂದಸ್ವಾಮಿ, ಶಿವಕುಮಾರ್‌ ಇದ್ದರು.