ಚಿಕ್ಕಮಗಳೂರು: ನಗರ ಗೃಹ ನಿರ್ಮಾಣ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 2,70,551ರೂ. ನಿವ್ವಳ ಲಾಭಗಳಿಸಿದೆ: ಹೆಚ್.ಎಂ.ನಾರಾಯಣ.

62
firstsuddi

ಚಿಕ್ಕಮಗಳೂರು: ನಗರ ಗೃಹ ನಿರ್ಮಾಣ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 2,70,551ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ.ನಾರಾಯಣ ಹೇಳಿದರು.

ನಗರದ ವಿದ್ಯಾಭಾರತಿ ಸಭಾಂಗಣದಲ್ಲಿ ನಿನ್ನೆ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಾಭಾಂಶದಲ್ಲಿ ಶೇ.5ರಷ್ಟು ಡಿವಿಡೆಂಟ್‍ಅನ್ನು ಸದಸ್ಯರಿಗೆ ನೀಡಲಾಗುವುದು. ಸಂಘದ ಶತಮಾನೋತ್ಸವದ ನೆನಪಿಗಾಗಿ ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ಹೆಚ್ಚುವರಿ ಶಾಖೆಯನ್ನು ತೆರೆಯಲಾಗುವುದು. ಅದಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರದ 1900 ಅಡಿ ವಿಸ್ತೀರ್ಣದ ನಿವೇಶನವನ್ನು 10 ಲಕ್ಷ ರೂ.ಗಳಿಗೆ ಖರೀದಿಸಲಾಗಿದೆ ಎಂದು ತಿಳಿಸಿದರು.

ಸಂಘ ಪ್ರಸಕ್ತ ಸಾಲಿನಲ್ಲಿ 2ಕೋಟಿ 80 ಲಕ್ಷ ರೂ. ವ್ಯವಹಾರ ನಡೆಸಿದೆ ಎಂದ ಅವರು, ಆಧಾರ ಸಾಲದ ಮಿತಿಯನ್ನು 5 ರಿಂದ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ವ್ಯಾಪಾರ ಸಾಲವನ್ನು 50 ಸಾವಿರದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಸಂಘದ ನಿರ್ದೇಶಕ ಎಲ್.ಕೆ. ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪಿ.ಸಂತೋಷ್ ವಾರ್ಷಿಕ ವರದಿಯನ್ನು ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಚರಣೆ ಮಾಡಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಿರಿಯ ಸದಸ್ಯರುಗಳಿಗೆ ಸನ್ಮಾನ ಮಾಡಲಾಯಿತು.

ಸಂಘದ ಉಪಾಧ್ಯಕ್ಷೆ ಎಲ್.ಕೆ. ರುಕ್ಮಿಣಿ ಕೃಷ್ಣಮೂರ್ತಿ, ನಿರ್ದೇಶಕರಾದ ಸಿ.ಎಸ್. ಕುಬೇರ, ಎಲ್.ವಿ.ಕೃಷ್ಣಮೂರ್ತಿ, ಸಿ.ಎಸ್. ಏಕಾಂತರಾಮು, ಸಿ.ಎಂ. ವೇಣುಗೋಪಾಲ್, ಬಿ.ವಿರೂಪಾಕ್ಷಪ್ಪ, ಸಿ.ಡಿ. ರವೀಂದ್ರ ನಾಯ್ಕ, ಸಿ.ಇ. ಗೀತಾ, ವಿಶ್ವನಾಥ್, ಬಿ.ಎಂ. ಕುಮಾರ್ ಉಪಸ್ಥಿತರಿದ್ದರು.