ಚಿಕ್ಕಮಗಳೂರು : ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಸಕಾಲಕ್ಕೆ ಸಂಬಳ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವಂತೆ ಜಿಲ್ಲಾಧಿಕಾರಿಗೆ ಮನವಿ…

261
firstsuddi

ಚಿಕ್ಕಮಗಳೂರು : ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ಸಕಾಲಕ್ಕೆ ಸಂಬಳ ಪಾವತಿಸುವುದು ಸೇರಿದಂತೆ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ಇಂದು ಬೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಪಿಯು ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಈ ಸಂಬಂಧ ಮನವಿ ಸಲ್ಲಿಸಿದರು.
ಕಳೆದ 2 ತಿಂಗಳಿನಿಂದ ವೇತನ ನೀಡದ ಹಿನ್ನೆಲೆಯಲ್ಲಿ ಅದನ್ನೆ ನಂಬಿರುವ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಜೀವನ ನಿರ್ವಹಣೆ ಮಾಡಲಾಗದೆ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಮತ್ತು ಪಿಯು ಇಲಾಖೆ ತುರ್ತು ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಈ ಸಂಬಂಧ ಪ್ರತಿಭಟನೆಗೆ ನಿರ್ಧರಿಸಿದ ಉಪನ್ಯಾಸಕರ ವಿರುದ್ದ ಶಿಕ್ಷಣ ಇಲಾಖೆ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿರುವುದು ಖಂಡನೀಯ ಎಂದ ಅವರು ತಕ್ಷಣ ವೇತನ ಪಾವತಿಸಬೇಕು ಎಂದು ಅಗ್ರಹಿಸಿದರು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಈ ಹಿಂದೆ ನೀಡಿದ್ದ ಲಿಖಿತ ಭರವಸೆಯಂತೆ ಎರಡನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು.2008 ನಂತರ ಸೇವೆಗೆ ಸೇರಿದವರಿಗೆ ನೀಡುತ್ತಿದ್ದ 500 ರೂ ವಿಶೇಷ ಭತ್ಯೆಯನ್ನು ಕೂಡಲೇ ಮೂಲವೇತನದಲ್ಲಿ ವಿಲೀನಗೊಳಿಸಬೇಕು, ಭತ್ಯೆಯನ್ನು ಮರುಪಾವತಿಸುವಂತೆ ಮಾಡಿರುವ ಅದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರೌಡ ಶಾಲೆಯಿಂದ ಪದೋನ್ನತಿ ಹೊಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ 10 ರಿಂದ 25 ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು. ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರ ಕುರಿತು ಉನ್ನತ ಮಟ್ಟದ ಪರಿಷತ್ ಸಮಿತಿಯನ್ನು ರಚಿಸಬೇಕು ಅಲ್ಲಿಯವರೆಗೂ ಅವರಿಗೆ 16 ಗಂಟೆಗಳ ಭೋದನಾ ಅವಧಿಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ನೆಟ್, ಸ್ಲೆಟ್, ಪಿಎಚ್‍ಡಿ ವಿಧ್ಯಾರ್ಹತೆ ಹೊಂದಿರುವವರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು, ಅನುದಾನಿತ ಕಾಲೇಜುಗಳಲ್ಲಿರುವ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆ ಮುಂಬಡ್ತಿ ನೀಡಬೇಕು, ಅವರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಡಿ.ಸುದರ್ಶನ್, ಕಾರ್ಯಧ್ಯಕ್ಷ ಜಿ.ರೇವಣ್ಣ, ಪ್ರದಾನ ಕಾರ್ಯದರ್ಶಿ ಎಲ್.ಜಿ.ಉದಯಶಂಕರ್, ಖಜಾಂಚಿ ಎಂ.ಡಿ.ಉಮೇಶ್, ಮೂಡಿಗೆರೆ ತಾಲೂಕು ಅಧ್ಯಕ್ಷ ಧರ್ಮಶೆಟ್ಟಿ,ಎನ್.ಅರ್.ಪುರ ತಾಲೂಕು ಅಧ್ಯಕ್ಷ ಎ.ಜೆ.ಡೇವಿನ್, ಕೊಪ್ಪ ತಾಲೂಕು ಅಧ್ಯಕ್ಷ ಹೆಚ್.ಕೆ.ಚಕ್ರಪಾಣಿ, ತರೀಕೆರೆ ಅಧ್ಯಕ್ಷ ಹೆಚ್.ನರಸಿಂಹ ಮೂರ್ತಿ, ಅಜ್ಜಂಪುರ ಅಧ್ಯಕ್ಷ ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರ ಹಾಜರಿದ್ದರು.