ಚಿಕ್ಕಮಗಳೂರು : ಪ್ರತಿನಿತ್ಯ ಕ್ರಮಬದ್ದವಾಗಿ ಯೋಗಾಸನ ಮಾಡುವುದರಿಂದ ನಿರೋಗಿಯಾಗಿ ಬದುಕಲು ಸಾಧ್ಯ ಎಂದು ಆಯುಷ್ ಆಸ್ಪತ್ರೆಯ ಹಿರಿಯ ವೈಧ್ಯಾಧಿಕಾರಿ ಡಾ|| ವಿಕ್ರಮ್ ಹೇಳಿದರು.
ವಿಶ್ವಯೋಗ ದಿನಾಚರಣೆ ಅಂಗವಾಗಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿರುವ ಯೋಗಸಪ್ತಾಹ-ಯೋಗ ಕಲಿಕಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಆಧುನಿಕತೆಯ ನಾಗಾಲೋಟದಲ್ಲಿ ಸದಾ ಒತ್ತಡದ ನಡುವೆ ಬದುಕುತ್ತಿರುವುದರಿಂದಾಗಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಮಾನಸಿಕ ಮತ್ತು ದೈಹಿಕ ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ ಎಂದ ಅವರು ಅವುಗಳ ನಿವಾರಣೆಗೆ ಅಥವಾ ನಿಯಂತ್ರಣಕ್ಕೆ ಯೋಗಾಭ್ಯಾಸ ದಿವ್ಯೌಷಧವಾಗಿದೆ ಎಂದರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಆಯುಷ್ ವೈದ್ಯ ಡಾ|| ವಿರೂಪಾಕ್ಷಪ್ಪ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸಹಕಾರಿ, ಯೋಗಾಭ್ಯಾಸದಿಂದ ಧೀರ್ಘಾಯುಷಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ 7 ದಿನಗಳ ಕಾಲದ ಈ ಶಿಬಿರದಲ್ಲಿ ವಿವಿಧ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಪ್ರಾರ್ಥನೆ, ಪ್ರಾಣಾಯಾಮ ಮತ್ತು ಯೋಗಾಸನವನ್ನು ಕಲಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಆಯುಷ್ ವೈದ್ಯ ಡಾ|| ರಘು ಉಪಸ್ಥಿತರಿದ್ದರು.










