ಚಿಕ್ಕಮಗಳೂರು : ಮುಂಬರುವ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಪ.ಜಾತಿ/ಪ.ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್ ಅವರ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದ ಬಳಿ ಧರಣಿ ನಡೆಸಿದ ಕಾರ್ಯಕರ್ತರು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಸಲ್ಲಿಸಿರುವ ಒಳಮೀಸಲಾತಿ ವರ್ಗೀಕರಣದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಸಿ.ವಸಂತಕುಮಾರ್ ಕರ್ನಾಟಕ ಪ.ಜಾತಿ/ಪ.ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ತೀರ್ಪು ನೀಡಿರುವುದರಿಂದಾಗಿ ಬಹುತೇಕ ಪ್ರಕರಣಗಳು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ವಜಾಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಬಜೆಟ್ ಅಧಿವೇಶನದಲ್ಲಿ ಕಾಯ್ದೆಗೆ ಯಾವುದೇ ಧಕ್ಕೆಯಾಗದಂತೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ದಲಿತ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಸಲ್ಲಿಸಿರುವ ಒಳಮೀಸಲಾತಿ ವರ್ಗೀಕರಣದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಬಗರ್ ಹುಕುಂ ಸಕ್ರಮೀಕರಣದಲ್ಲಿ ಪ.ಜಾತಿ/ಪ.ಪಂಗಡಗಳ ವಜಾಗೊಂಡಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಪ್ರಕಾರ ಪ.ಜಾತಿ/ಪ.ವರ್ಗಗಳಿಗೆ ಶೇ.50ರಷ್ಟು ಭೂಮಿ ಮೀಸಲಿಡಲು ಶಾಸನ ಜಾರಿಗೆ ತರಬೇಕು ಎಂದು ಹೇಳಿದರು.
ಪ.ಜಾತಿ/ಪ.ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸೌಲಭ್ಯ ವಿತರಿಸಲು ಸ್ಥಳಿಯ ಶಾಸಕರ ಶಿಫಾರಸ್ಸು ಪಡೆಯ ಬೇಕೆಂದಿರುವ ಆದೇಶವನ್ನು ಹಿಂಪಡೆಯಬೇಕು, ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಬೇಕು, ದಲಿತ ವಿದ್ಯಾರ್ಥಿಗಳ ಹಾಸ್ಟೆಲ್‍ಗಳಲ್ಲಿ ಖಾಲಿ ಇರುವ ವಾರ್ಡನ್‍ಗಳ ಹುದ್ದೆಯನ್ನು ತಕ್ಷಣ ತುಂಬಬೇಕು ಎಂದು ಆಗ್ರಹಿಸಿದರು.
ಹೋರಾಟದ ಸಂದರ್ಭಗಳಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲೆ ಹಾಕಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಬೇಕು, ರೌಡಿ ಶೀಟರ್ ಪಟ್ಟಿಯಿಂದ ಅವರುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಚಂದ್ರಪ್ಪ, ಕಡೂರು ಸಂಚಾಲಕ ಬಿ.ಎನ್.ಚೌಡಪ್ಪ, ಪದಾಧಿಕಾರಿಗಳಾದ ಹೆಚ್.ಇ.ದೊಡ್ಡಯ್ಯ, ಮೃತ್ಯುಂಜಯ, ವಿ.ಧರ್ಮೇಶ್, ಸಗುನಪ್ಪ, ಧರ್ಮ, ಮಂಜುನಾಥ, ಯಶೋಧರ, ಯೋಗೀಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಪ.ಜಾತಿ/ಪ.ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ...










