ಚಿಕ್ಕಮಗಳೂರು : ಮಂತ್ರ ಮಯೂರಿ ಯಕ್ಷಗಾನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು…

589
firstsuddi

ಚಿಕ್ಕಮಗಳೂರು : ಜಿಲ್ಲಾ ಮೊಗವೀರ ಮಹಾಜನ ಸಂಘದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಟ್ಟಿಯಂಗಡಿ ಮೇಳ ಮತ್ತು ವಿವಿಧ ತಂಡಗಳ ಖ್ಯಾತ ಕಲಾವಿದರಿಂದ ಭಾನುವಾರ ನಡೆದ ಮಂತ್ರ ಮಯೂರಿ ಯಕ್ಷಗಾನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಭಾಗವತರ ಕಂಚಿನ ಕಂಠದ ಗಾಯನ, ಪಾತ್ರಧಾರಿಗಳ ಚುರುಕು ಸಂಭಾಷಣೆ, ಮಿಂಚಿನ ಅಭಿನಯ, ನೃತ್ಯ, ನವಿರು ಹಾಸ್ಯ ನೋಡುಗರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟಿತು.
ಹಾಸ್ಯ ಪಾತ್ರಧಾರಿ ಹಳ್ಳಾಡಿ ಜಯರಾಮಶೆಟ್ಟಿ ಪ್ರಾಸಬದ್ದವಾಗಿ ಸಂಭಾಷಣೆ ಮಾಡುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರೆ, ಮಯೂರಿ ಪಾತ್ರಧಾರಿ ಸುಧೀಂದ್ರ ಉಪ್ಪೂರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸುವ ಮೂಲಕ ಗಮನ ಸೆಳೆದರು.
ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಭಾಗವತ ಹೆಬ್ರಿ ಗಣೇಶ್ ಮತ್ತು ಮೊಗವೀರ ಸಮುದಾಯದ ಹಿರಿಯ ಬಿ.ಸೀನ ಅವರನ್ನು ಸಮಾರಂಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು, ಪಿಯುಸಿ ಪರೀಕ್ಷೆಯಲ್ಲಿ ಶೇ.92 ರಷ್ಟು ಅಂಕಗಳಿಸಿದ ವಿದ್ಯಾರ್ಥಿ ಸುಮಂತ್ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಡಿ.ಎಲ್.ಶಂಕರ್‍ನಾಥ್, ಮಾಜಿ ಅಧ್ಯಕ್ಷ ಕೆ.ರಾಮಣ್ಣ, ಉಪಾಧ್ಯಕ್ಷರಾದ ಕೆ.ಸತ್ಯ, ಬಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್, ಸಹಕಾರ್ಯದರ್ಶಿಗಳಾದ ಕೆ.ಹೆಚ್.ಆನಂದ್, ಡಿ.ಎನ್.ಚಂದ್ರು, ಖಜಾಂಚಿ ಕೃಷ್ಣ ಕಾಂಚನ್, ಕೆ.ನಂದೀಶ್, ಕೆ.ಹೆಚ್.ನರಸಿಂಹ ಉಪಸ್ಥಿತರಿದ್ದರು.