ಚಿಕ್ಕಮಗಳೂರು : ಮಾಸಿಕ ವೇತನವನ್ನು ತುರ್ತಾಗಿ ನೀಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕೃಷಿ ಇಲಾಖೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ…

1014
firstsuddi

ಚಿಕ್ಕಮಗಳೂರು : ತಮ್ಮ ಮಾಸಿಕ ವೇತನವನ್ನು ತುರ್ತಾಗಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಬುಧವಾರ ಭೇಟಿ ಮಾಡಿದ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮಗೆ ಕಳೆದ ಹತ್ತು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಇದರಿಂದಾಗಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಪ್ರಯಾಣದ ವೆಚ್ಚ, ಅತ್ಯವಶ್ಯಕ ಔಷಧಿಗಳ ಖರೀದಿ ಹಾಗೂ ದೈನಂದಿನ ಖರ್ಚುಗಳಿಗೆ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಶೇ.40 ರಷ್ಟು ಸಿಬ್ಬಂದಿಗಳ ಕೊರತೆಯ ನಡುವೆಯೂ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ, ಹೆಚ್ಚಿನ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ತಮಗೆ ಕನಿಷ್ಠ ಮಾಸಿಕ ವೇತನ ಸಮಯಕ್ಕೆ ಸರಿಯಾಗಿ ಬಾರದಿರುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿದ್ದೇವೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಮಾಸಿಕ ವೇತನವನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿವಿಧ ತಾಲ್ಲೂಕು ಕೃಷಿ ಅಧಿಕಾರಿಗಳಾದ ಶಿವಶಂಕರ್, ಜಯಶ್ರೀ, ಸೀಮಾ, ವೆಂಕಟೇಶ್, ಅರುಣ್ ಕುಮಾರ್, ಕೃಷಿ ಪದವೀಧರ ಸಂಘದ ನಿರ್ದೇಶಕರಾದ ಮೇನಕ, ಮಲ್ಲಿಕಾರ್ಜುನ್, ಶ್ರೀಶೈಲಾ, ವಿಶಾಲ್, ನಾಗರಾಜ್, ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಬೀರಪ್ಪ, ನಾಗರಾಜ್ ನಾಯಕ್, ಖಜಾಂಚಿ ಶರ್ಮಾ, ಸಹಾಯಕ ಕೃಷಿ ಅಧಿಕಾರಿ ಹನುಮಂತಪ್ಪ ಹಾಜರಿದ್ದರು.