ಚಿಕ್ಕಮಗಳೂರು : ದೇಶದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಹೆಚ್ಚಳ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಒತ್ತಾಯಿಸಿದೆ.
ಅತಿವೃಷ್ಟಿ, ಅನಾವೃಷ್ಟಿ, ಬೆಲೆಕುಸಿತ ಸೇರಿದಂತೆ ಅನೇಕ ಸಮಸ್ಯೆಗಳಿಂದ ಈಗಾಗಲೇ ಜರ್ಜರಿತರಾಗಿರುವ ದೇಶದ ರೈತರು ರಸಗೊಬ್ಬರದ ಬೆಲೆಹೆಚ್ಚಳದಿಂದಾಗಿ ಕೃಷಿ ಚಟುವಟಿಕೆ ನಡೆಸಲಾಗದೇ ಕಂಗಾಲಾಗಿದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್ ತಿಳಿಸಿದ್ದಾರೆ.
ರಸಗೊಬ್ಬರದ ಬೆಲೆಹೆಚ್ಚಳವನ್ನು ಹಿಂಪಡೆದಿರುವುದಾಗಿ ಕೇಂದ್ರ ರಾಸಯನಿಕ ಸಚಿವ ಡಿ.ವಿ.ಸದಾನಂದಗೌಡ ಅವರು ಹಲವು ಬಾರಿ ಹೇಳಿಕೆ ನೀಡಿದ್ದರೂ ಆದೇಶವನ್ನು ಪ್ರಾಮಾಣಿಕವಾಗಿ ಹಿಂಪಡೆದಿಲ್ಲ ಹಾಗಾಗಿ ಅಂಗಡಿಗಳಲ್ಲಿ ರಸಗೊಬ್ಬರವನ್ನು ಹೆಚ್ಚಳವಾದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಕ್ ಡೌನ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರು ಹೆಚ್ಚಳವಾದ ಬೆಲೆಗೆ ರಸಗೊಬ್ಬರವನ್ನು ಕೊಳ್ಳಲಾಗದೇ ಕೃಷಿ ಚಟುವಟಿಕೆಯನ್ನೇ ಕೈಬಿಡುವ ಚಿಂತನೆ ನಡೆಸಿದ್ದಾರೆ ಎಂದಿರುವ ಪ್ರಕಾಶ್ ರಸಗೊಬ್ಬರದ ಬೆಲೆ ಇಳಿಕೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಕೃಷಿ ಮಾಡುವುದನ್ನೇ ಕೈ ಬಿಡುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.
ಕೊರೊನಾ ಲಾಕ್ ಡೌನ್‍ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇಶದ ಬೆನ್ನೆಲುಬಾದ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯಸರ್ಕಾರ ತಕ್ಷಣ ಧಾವಿಸಬೇಕು. ಆ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.










