ಚಿಕ್ಕಮಗಳೂರು : ಪರಿಸರ ಮಾಲಿನ್ಯ ಮತ್ತು ಬೆಂಕಿ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪಟಾಕಿ ನಿಷೇಧಿಸುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಅವರನ್ನು ಬೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ಪಟಾಕಿ ಬದಲು ದೀಪ ಹಚ್ಚುವ ವ್ಯವಸ್ಥೆ ಜಾರಿಗೆ ತರುವಂತೆ ಸಲಹೆ ಮಾಡಿದರು.
ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸುವುದರಿಂದಾಗಿ ಪರಿಸರ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಆರೋಗ್ಯ ಹಾಳಾಗುತ್ತಿದೆ ಎಂದರು.
ಪ್ರತಿ ವರ್ಷ ಪಟಾಕಿ ಸಿಡಿಸುವ ವೇಳೆ ಅನಾಹುತವಾಗಿ ರಾಜ್ಯಾದ್ಯಂತ ಸಾವಿರಾರು ಮಕ್ಕಳು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಹಳಷ್ಟು ಜನ ಕಣ್ಣು ಕಳೆದುಕೊಳ್ಳುತ್ತಿದ್ದಾರೆ. ಪಟಾಕಿ ತಯಾರಿಸುವ ಕಂಪನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಮತ್ತು ಮಕ್ಕಳು ದುಡಿಯುತ್ತಿದ್ದು ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಇವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪಟಾಕಿಯನ್ನು ನಿಷೇಧಿಸಬೇಕು. ಅದರ ಬದಲಿಗೆ ಮನೆ ಮುಂದೆ ದೀಪ ಹಚ್ಚುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ. ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್. ಖಜಾಂಚಿ ವಾಹೀದ್ ಜಾನ್ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ನಗರಾಧ್ಯಕ್ಷ ಹನುಮಂತರಾಯ, ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ. ಕೆ ಎಸ್ ಮಂಜುಳ. ನವೀನ್. ಗಿರೀಶ್. ಹೊನ್ನಪ್ಪ. ಹಾಜರಿದ್ದರು.