ಚಿಕ್ಕಮಗಳೂರು : ಶಿಕ್ಷಕರೇ ಈ ದೇಶದ ಆಧಾರ ಸ್ತಂಭಗಳು : ಸೋಮಶೇಖರ್…

186
firstsuddi

ಚಿಕ್ಕಮಗಳೂರು : ಸಮಾಜಮುಖಿಯಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಮಾತ್ರ ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಅಲ್ಲಂಪುರದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಸೇವೆಯಿಂದ ನಿವೃತ್ತರಾದ ಮುಖ್ಯಶಿಕ್ಷಕ ಎಂ.ಎ.ರೇವಣ್ಣಗೌಡ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು, ನೌಕರರು ಮತ್ತು ಉದ್ಯೋಗಿಗಳಿಗೆ ಅಧಿಕಾರ ಶಾಶ್ವತವಲ್ಲ, ಅವರು ಒಂದಲ್ಲಾ ಒಂದು ದಿನ ನಿವೃತ್ತರಾಗಲೇಬೇಕು, ನಿವೃತ್ತರಾದವರಲ್ಲಿ ಬಹಳಷ್ಟು ಅಧಿಕಾರಿಗಳು ಜನರ ನೆನಪಿನಲ್ಲಿ ಉಳಿದಿಲ್ಲ ಎಂದ ಅವರು ಯಾರು ಪ್ರಾಮಾಣಿಕವಾಗಿ ಜನಪರವಾಗಿ ಕಾರ್ಯನಿರ್ವಹಿಸುತ್ತಾರೋ ಅಂತವರು ಮಾತ್ರ ಜನಮನ್ನಣೆ ಗಳಿಸುತ್ತಾರೆ ಎಂದರು.
ಶಿಕ್ಷಕರೇ ಈ ದೇಶದ ಆಧಾರ ಸ್ತಂಭಗಳು, ಅವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ವಿದ್ಯಾವಂತ ಪ್ರಜೆಗಳನ್ನು ತಯಾರು ಮಾಡಿದರೆ ಮಾತ್ರ ರಾಷ್ಟ್ರ ಅಭಿವೃದ್ದಿ ಹೊಂದುತ್ತದೆ ಎಂದು ತಿಳಿಸಿದರು.
ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ಮಾತನಾಡಿ ಮುಖ್ಯಶಿಕ್ಷಕ ಎಂ.ಎ.ರೇವಣ್ಣಗೌಡ ಅವರ ಸರಳತೆ, ಸಜ್ಜನಿಕೆ, ಕಾರ್ಯವೈಖರಿ ಉಳಿದ ಶಿಕ್ಷಕರಿಗೆ ಮಾದರಿಯಾಗಬೇಕು ಎಂದು ಸಲಹೆ ಮಾಡಿದರು.
ಸೇವೆಯಿಂದ ನಿವೃತ್ತರಾದ ಮುಖ್ಯಶಿಕ್ಷಕ ಎಂ.ಎ.ರೇವಣ್ಣಗೌಡ ದಂಪತಿಯನ್ನು ಸಮಾರಂಭದಲ್ಲಿ ಶಾಲೆ, ಗ್ರಾಮ ಪಂಚಾಯಿತಿ, ಜಿಲ್ಲೆ ಮತ್ತು ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರೇವಣ್ಣಗೌಡ 38 ವರ್ಷಗಳ ಸೇವೆ ತಮಗೆ ಅತ್ಯಂತ ತೃಪ್ತಿ ತಂದಿದೆ ಎಂದರು.ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಹೇಮಾವತಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಜಗದೀಶ್, ತಾಲ್ಲೂಕು ಅಧ್ಯಕ್ಷ ಚಂದ್ರಯ್ಯ, ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ, ಸಿಆರ್‍ಪಿ ಜಗದೀಶ್, ರೇಖಾ ರೇವಣ್ಣಗೌಡ, ಶಿಕ್ಷಕ ಎಲ್.ಜಿ.ಪರಮೇಶ್ವರಪ್ಪ ಉಪಸ್ಥಿತರಿದ್ದರು.
ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.