ಚಿಕ್ಕಮಗಳೂರು : ಶುದ್ದವಾದ ಗಾಳಿ, ನೀರು ಮತ್ತು ಆಹಾರಕ್ಕಾಗಿ ಅರಣ್ಯವನ್ನು ಬೆಳೆಸಲೇಬೇಕಾದ ಅನಿವಾರ್ಯತೆ ಇಂದಿದೆ : ಡಿ.ವಿ.ಗಿರೀಶ್…

336
firstsuddi

ಚಿಕ್ಕಮಗಳೂರು : ಶುದ್ದವಾದ ಗಾಳಿ, ನೀರು ಮತ್ತು ಆಹಾರಕ್ಕಾಗಿ ಅರಣ್ಯವನ್ನು ಬೆಳೆಸಲೇಬೇಕಾದ ಅನಿವಾರ್ಯತೆ ಇಂದಿದೆ ಎಂದು ಪರಿಸರವಾದಿ ಡಿ.ವಿ.ಗಿರೀಶ್ ಹೇಳಿದರು.
ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

firstsuddi

ನಮ್ಮ ಹಿರಿಯರು ಬಹಳಷ್ಟು ಪ್ರಮಾಣದಲ್ಲಿ ಅರಣ್ಯವನ್ನು ಬೆಳೆಸಿದ್ದರು ಅದರಿಂದಾಗಿ ಅಂದು ಕಾಲಕಾಲಕ್ಕೆ ಮಳೆಯಾಗಿ ಭೂಮಿ ಸಮೃದ್ದಿಯಾಗಿತ್ತು, ಆದರೆ ನಮ್ಮ ದುರಾಸೆ ಮತ್ತು ಸ್ವಾರ್ಥದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಅರಣ್ಯವನ್ನು ನಾಶ ಮಾಡಿದ್ದೇವೆ ಅದರ ಪರಿಣಾಮ ಸಕಾಲಕ್ಕೆ ಮಳೆಯಾಗದೆ ಬರದ ಪರಿಸ್ಥಿತಿ ಎದುರಾಗುತ್ತಿದೆ ಎಂದು ವಿಷಾದಿಸಿದರು.
ಅರಣ್ಯ ನಾಶದ ಪರಿಣಾಮ ಈಗಾಗಲೇ ಬಹಳಷ್ಟು ನದಿ ಮತ್ತು ನೀರಿನ ಸೆಲೆಗಳನ್ನು ಕಳೆದುಕೊಂಡಿದ್ದೇವೆ, ಶುದ್ದವಾದ ಗಾಳಿ ಮತ್ತು ನೀರಿಲ್ಲದೆ ಅನೇಕ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ ಎಂದರು.
ಶುದ್ದವಾದ ಗಾಳಿ, ನೀರು ಮತ್ತು ಆಹಾರವಿಲ್ಲದೆ ಪ್ರಾಣಿ, ಪಕ್ಷಿಗಳಾಗಲಿ ಅಥವಾ ಮನುಷ್ಯರಾಗಲಿ ಬದುಕಲು ಸಾಧ್ಯವಿಲ್ಲ, ಇತ್ತೀಚಿನ ವರ್ಷಗಳಲ್ಲಿ ಜನ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆ, ವಿಶ್ವದಲ್ಲಿ 700 ಕೋಟಿಗೂ ಅಧಿಕ ಜನಸಂಖ್ಯೆಯಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ನೀರು, ಗಾಳಿ ಮತ್ತು ಆಹಾರದ ಕೊರತೆ ಎದುರಾಗಲಿದೆ ಎಂದ ಅವರು ಈ ಹಿನ್ನೆಲೆಯಲ್ಲಿ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ನಮಗೂ ಪರಿಸರಕ್ಕೂ ಸಂಬಂಧವಿಲ್ಲ ಎಂಬ ಧೋರಣೆ ಬಿಟ್ಟು ಎಲ್ಲರೂ ಗಿಡಮರಗಳನ್ನು ಕಡ್ಡಾಯವಾಗಿ ಬೆಳೆಸುವ ಮೂಲಕ ಅರಣ್ಯವನ್ನು ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಜೆ.ಜಿ.ಸುರೇಂದ್ರ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜಿನಲ್ಲಿ ಪ್ರತಿವರ್ಷ ವನಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವನಮಹೋತ್ಸವದ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.
ಉಪನ್ಯಾಸಕ ಸಿ.ಎನ್.ಮಂಜುನಾಥ್ ಉಪಸ್ಥಿತರಿದ್ದರು, ವಿದ್ಯಾರ್ಥಿಗಳಾದ ಭಾವನ ಮತ್ತು ಭೂಮಿಕ ಕಾರ್ಯಕ್ರಮವನ್ನು ನಿರೂಪಿಸಿದರು, ರಾಹುಲ್ ಸ್ವಾಗತಿಸಿದರು, ಪೃಥ್ವಿರಾಜ್ ಮೆಲಾಂಟಾ ವಂದಿಸಿದರು.