ಚಿಕ್ಕಮಗಳೂರು : ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ಗುರುಪೌರ್ಣಮಿ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಇಂದು ಸರಳವಾಗಿ ಆಚರಿಸಲಾಯಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ ಬಾಬಾ ಅವರ ವಿಗ್ರಹಕ್ಕೆ ಕಾಕಡಾರತಿ, ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ಜರುಗಿತು. ನಂತರ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಮಧ್ಯಾಹ್ನ ವಿಶೇಷ ಆರತಿ, ಮಹಾಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆದವು.
ಇದೇ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ನಾಮಸಂಕೀರ್ತನೆ, ಸೋತ್ರ ಪಠಣ ನಡೆಯಿತು. ಸಂಜೆ ದೂಪಾರತಿ, ರಾತ್ರಿ ಶೇಜಾರತಿ ಜರುಗಿವು. ವೇದಬ್ರಹ್ಮ ನಂದಿಪುರ ಮಂಜುನಾಥ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.
ಗುರುಪೌರ್ಣಮಿ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಅವರ ಮೂಲವಿಗ್ರಹದ ಪಾದಸ್ಪರ್ಶಕ್ಕೆ ಅವಕಾಶವಿದ್ದ ಹಿನ್ನೆಲೆಯಲ್ಲಿ ಬೆಳಿಗಿನಿಂದ ರಾತ್ರಿಯವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಮಂದಿರಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತು ಬಾಬಾ ಅವರ ಪಾದಸ್ಪರ್ಶಿಸಿ ಧನ್ಯತಾ ಭಾವ ಮೆರೆದರು.
ಇದೇ ವೇಳೆ ಮಾತನಾಡಿದ ಮಂದಿರದ ಮುಖ್ಯ ಟ್ರಸ್ಟಿ ಜಿ.ಎನ್.ಆನಂದಸಾಯಿ ಪ್ರತಿ ವರ್ಷ ಗುರುಪೌರ್ಣಮಿ ಮಹೋತ್ಸವವನ್ನು ಸಹಸ್ರಾರು ಭಕ್ತರೊಂದಿಗೆ ಅದ್ದೂರಿಯಾಗಿ ಆಚರಿಸಲಾ ಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.










