ಚಿಕ್ಕಮಗಳೂರು : ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ನೇತ್ರದಾನ ಮಾಡಲು ಮುಂದಾಗಬೇಕು : ಗಾಯತ್ರಿ ಶಾಂತೇಗೌಡ.

89
firstsuddi

ಚಿಕ್ಕಮಗಳೂರು : ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ನೇತ್ರದಾನ ಮಾಡಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಸಲಹೆ ಮಾಡಿದರು.

ಬ್ಲಾಕ್ ಯುವಕಾಂಗ್ರೆಸ್ ಇಲ್ಲಿನ ಟಿಪ್ಪುನಗರದಲ್ಲಿ ಇಂದು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೇತ್ರದಾನ ಮಹಾದಾನ, ನೇತ್ರದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ನಾವು ಇನ್ನೊಬ್ಬರ ಬಾಳಿಗೆ ಬೆಳಕಾಗಲು ಸಾಧ್ಯವಾಗುತ್ತದೆ ಎಂದ ಅವರು ಸಾರ್ವಜನಿಕರು, ಸಂಘ-ಸಂಸ್ಥೆಗಳು ಇದನ್ನು ಅರಿಯಬೇಕು. ನೇತ್ರದಾನ ಮಾಡುವ ಮೂಲಕ ಅಂಧರ ಬದುಕಿಗೆ ಬೆಳಕಾಗಬೇಕು ಎಂದು ಮನವಿ ಮಾಡಿದರು.

ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಹೀಲ್‍ಷರೀಫ್ ಮಾತನಾಡಿ ಉಚಿತ ರಕ್ತದಾನ ಶಿಬಿರ, ನೇತ್ರದಾನ ಶಿಬಿರಗಳನ್ನು ಪ್ರತಿ ವರ್ಷ ಆಯೋಜಿಸುವ ಮೂಲಕ ಯುವಕಾಂಗ್ರೆಸ್ ಸಮಾಜಸೇವೆ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‍ಕುಮಾರ್ ಮಾತನಾಡಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ಹೆಚ್ಚು ಆಯೋಜಿಸಬೇಕು ಎಂದು ಸಲಹೆ ಮಾಡಿದರು.

ಕಡೂರಿನ ಶರತ್ ಕಣ್ಣಿನ ಆಸ್ಪತ್ರೆಯ ತಂಡ ಶಿಬಿರದಲ್ಲಿ ಪಾಲ್ಗೊಂಡು ಬೆಳಗಿನಿಂದ ಸಂಜೆಯವರೆಗೆ 212 ಜನರ ನೇತ್ರ ತಪಾಸಣೆ ನಡೆಸಿತು. ಈ ವೇಳೆ 22 ಜನರನ್ನು ಕಣ್ಣಿನ ಪೊರೆ, ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಸುಬಾನ್, ನಗರಾಧ್ಯಕ್ಷ ತನೋಜ್, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಜಾವೀದ್, ಎನ್.ಎಸ್.ಚೇತನಾ, ಸಿ.ಎನ್.ಅಕ್ಮಲ್, ಹರ್ಷವರ್ಧನ್, ರಫೀಕ್ ಅಹ್ಮದ್ ಹಾಜರಿದ್ದರು.