ಚಿಕ್ಕಮಗಳೂರು: ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಸಾಹಿತಿಗಳು ಮತ್ತು ಲೇಖಕರ ಕೊಡುಗೆ ಅಪಾರವಾಗಿದ್ದು: ಡಾ|| ಡಿ.ಎಲ್.ವಿಜಯಕುಮಾರ್

653

ಚಿಕ್ಕಮಗಳೂರು : ನಗರದ ಎಂ.ಎಲ್.ಎಂ.ಎನ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪುಸ್ತಕ ಓದು ಮತ್ತು ವಿಮರ್ಶಾ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಜಿಲ್ಲೆಯ ಲೇಖಕರ ಕೃತಿಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ಸಾಹಿತಿ ಡಾ||ಬೆಳವಾಡಿ ಮಂಜುನಾಥ್ ಅವರ ಸಾಧನಾ ಕೃತಿಯ ಕುರಿತು ವಿದ್ಯಾರ್ಥಿ ಎಂ.ಎಸ್.ಬಿಂದು, ಕಲ್ಕುಳಿ ವಿಠಲ ಹೆಗ್ಗಡೆ ಅವರ ಮಂಗನ ಬ್ಯಾಟೇ ಕುರಿತು ಕೆ.ಎಸ್.ಬಿಂದು, ಹಳೇಕೋಟೆ ರಮೇಶ್ ಅವರ ವಿಯೆಟ್ನಾಂ ಕಾಫಿ ಪ್ರವಾಸ ಕಥನದ ಬಗ್ಗೆ ಹೆಚ್.ಆಶಾರಾಣಿ, ಕುಂದೂರು ಅಶೋಕ್ ಅವರ ಚಿಂತನಾ ಲಹರಿ ಬಗ್ಗೆ ಡಿ.ಎಲ್.ಪುನರ್ವಿ, ಲೇಖಕಿ ಡಿ.ನಳಿನಾ ಅವರ ಬೆಳಕ ಜೋಳಿಗೆ ಕುರಿತು ಹೆಚ್.ಪಿ.ಜಯಂತಿ ಲೇಖಕರ ಎದುರೇ ವಿಮರ್ಶೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್ ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಸಾಹಿತಿಗಳು ಮತ್ತು ಲೇಖಕರ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ಅವುಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ ಓದುವ ಹವ್ಯಾಸದಿಂದ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ವಿದ್ಯಾರ್ಥಿಗಳಿಗೆ ಜಿಲ್ಲೆಯ ಲೇಖಕರ ಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ ದೇಸಾಯಿ, ಸಾಹಿತಿಗಳಾದ ಡಾ|| ಬೆಳವಾಡಿ ಮಂಜುನಾಥ್, ಹಳೇಕೋಟೆ ರಮೇಶ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಗೌರವ ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ಸಂಘಟನಾ ಕಾರ್ಯದರ್ಶಿ ಕೆ.ಚಂದ್ರಯ್ಯ ಉಪಸ್ಥಿತರಿದ್ದರು.