ಕಾಫಿ ಬೆಳೆಗಾರರ ಗಾಯದ ಮೇಲೆ ಉಪ್ಪು ಹಾಕಿದ ವರುಣ ದೇವ….! 

2652
  • ರಾಘವೇಂದ್ರ ಕೆಸವಳಲು 

ಮೂಡಿಗೆರೆ : ಮಳೆ ಬಂದಾಗ ಆಗೋದು ಕಷ್ಟ ನಿಂತ ಮೇಲೆ ಗೊತ್ತಾಗೋದು ನಷ್ಟ ಎಂಬ ಮಾತಿನ ಅರ್ಥ ಈ ವರ್ಷ ಮಲೆನಾಡಿನ ಕಾಫಿ ಬೆಳೆಗಾರರಿಗೆ ಚೆನ್ನಾಗಿ ಅರಿವಾಗಿದೆ.  ಬೆಳೆ-ಬೆಲೆ ಎರಡೂ ಇಲ್ಲದೆ ಕಂಗಾಲಾಗಿದ್ದ ಕಾಫಿ ಬೆಳೆಗಾರರಿಗೆ ಮುಂದಿನ ಇನ್ನೆರಡೂ ವರ್ಷವೂ ಬೆಳೆ ಬರಲ್ವೆನೋ ಎಂಬ ಆತಂಕ ಮನೆಮಾಡಿದೆ. ಕಳೆದೊಂದು ತಿಂಗಳಿಂದ ಕಾಫಿ ಬೆಳೆಗಾರರ ಮೇಲೆ ವರುಣ ದೇವನಿಗೆ ಕೋಪವೇನೋ ಎಂಬಂತೆ ಸುರಿದ ಮಳೆರಾಯನಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಬೆಳೆ ಇದ್ದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಇರದಂತ ಸಂದಿಗ್ಧ ಸ್ಥಿತಿಯಲ್ಲಿದ್ದ ಕಾಫಿ ಬೆಳೆಗಾರರು ಮುಂದೆ ನಮ್ಮ ಬದುಕಿನ ಕಥೆ ಏನು ಎಂದು ತಲೆ ಮೇಲೆ ಕೈ ಹೊದ್ದು ಕೂರುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಗಾಗಿ ಆಕಾಶ ನೋಡ್ತಿದ್ದ ಮಲೆನಾಡಿಗರು ಹಾಗೂ ಕಾಫಿ ಬೆಳೆಗಾರರು ಇದೀಗ ಕಂಡ-ಕಂಡ ದೇವರಿಗೆಲ್ಲಾ ಮಳೆ ನಿಂತರೆ ಸಾಕೆಂದು ಕೈ ಮುಗಿಯುತ್ತಿದ್ದಾರೆ. ಇಷ್ಟು ದಿನ ಮಳೆಯಿಂದ ಬೀದಿ ಪಾಲಾಗಿದ್ದ ಮಲೆನಾಡಿಗರನ್ನ ಸಂಪೂರ್ಣ ಬರ್ಬಾದ್ ಮಾಡಲು ಮತ್ತೆ  ಗಾಳಿ-ಮಳೆಯಾಗುತ್ತಿರುವುದು  ಕಾಫಿ ಬೆಳೆಗಾರರಿಗೆ ದಾರಿ ಕಾಣದಂತಾಗಿದೆ.

firstsuddi

ಹೌದು, ಕಾಫಿಯ ದರ ಕುಸಿದಾಗ ಭವಿಷ್ಯದ ಬಗ್ಗೆ ಕತ್ತಲು ಕವಿದು, ಕಾಫಿ ಬೆಳೆಗಾರರ ಬದುಕೇ ಕುಸಿದಿತ್ತು. ಕಾಫಿ ಬೆಳೆಗಾರರು ಸಾಹುಕಾರರೆಂಬ ಮಾತಿಗೆ ತದ್ವಿರುದ್ಧವಾಗಿತ್ತು ಪ್ಲಾಂಟರ್ಸ್‍ಗಳ ಬದುಕು. ನಾವು ಸಾಹುಕಾರರಲ್ಲ. ಬೆಳೆಗಾರರಷ್ಟೆ. ನಾವು ಸಾಲ ಮಾಡಿದ್ದೇವೆ. ಹೆಂಡತಿ-ಮಕ್ಕಳ ವಡವೆಯನ್ನ ಅಡಮಾನವಿಟ್ಟಿದ್ದೇವೆ, ಬ್ಯಾಂಕ್‍ನವರು ನೋಟಿಸ್ ಕಳಿಸಿದ್ದಾರೆ, ಕಾಫಿ ಬೆಳೆಗಾರರ ಬದುಕು ಮೊದಲಿನಂತಿಲ್ಲ ಎಂದು ಕಾಫಿಯ ದರ ಕಂಡು ಎಲ್ಲರಿಗೂ ಮನವರಿಕೆಯಾಗಿತ್ತು. ಆದ್ರೆ, ಈ ವರ್ಷ ಮುಂಗಾರಿನ ಆರಂಭ ಕಾಫಿ ಬೆಳೆಗಾರರಲ್ಲಿ ಹೊಸ ಚೈತನ್ಯ ತಂದಿತ್ತು. ಉತ್ತಮ ಫಸಲಿನ ಆಸೆ ತಂದಿತ್ತು. ಆದ್ರೆ, ವರುಣ ದೇವನಿಗೆ ಮಲೆನಾಡಿಗರ ಮೇಲೆ ಅದೇನು ಕೋಪವೋ ಏನೋ ಕಾಳುಗಟ್ಟಿದ ಕಾಫಿ ಬೀಜ ಕೊನೆಗೂ ಕಾಫಿ ಗಿಡವೂ ಕಿತ್ತೋಗುವಂತೆ ಸುರಿದಿರೋದು ಕಾಫಿ ಬೆಳೆಗಾರರ ಬದುಕಲ್ಲಿ ಅಂದತ್ವ ತುಂಬಿದಂತಾಗಿದೆ. ಕಾಫಿ ಬೆಳೆಗಾರರ ಪಾಲಿಗೆ ಕಣ್ಣು ಕಾಣದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸತ್ತು ವರ್ಷಗಳೇ ಕಳೆದಿವೆ. ಆದ್ರೆ, ವರುಣ ದೇವನಿಗೂ ನಮ್ಮ ಮೇಲೆ ಏಕಿಂತಾ ಮುನಿಸೆಂದು ಬೆಳೆಗಾರರು ತಮ್ಮನ್ನ ತಾವೇ ಪ್ರಶ್ನಿಸಿಕೊಳ್ತಿದ್ದಾರೆ.

firstsuddi

ಯಾಕಂದ್ರೆ, ಕಳೆದ ಮೂರ್ನಾಲ್ಕು ವರ್ಷಳಿಂದ ಮಳೆ ಇಲ್ಲದಿದ್ರು ಬೆಳೆಗಾರರು ಕಷ್ಟಪಟ್ಟು ತೋಟ ಉಳಿಸಿಕೊಂಡಿದ್ರು. ಆದ್ರೆ, ಕಳೆದ ಒಂದು ತಿಂಗಳ ವರುಣನ ಅಬ್ಬರಕ್ಕೆ ಮಲೆನಾಡಿಗರು, ಕಾಫಿ ಬೆಳೆಗಾರರು ಹಾಗೂ ಸಣ್ಣ ರೈತರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕಳೆದ 5-6 ದಶಕದಲ್ಲಿ ಮಳೆಗಾಲದಲ್ಲೇ ಸುರಿಯದ ಮಳೆ ಈ ವರ್ಷ ಒಂದೇ ತಿಂಗಳಲ್ಲಿ ಸುರಿದಿದೆ. ಸರಾಸರಿ ಮಳೆಗಿಂತ ಶೇಕಡ 90 ರಷ್ಟು ಅಧಿಕ ಮಳೆಯಾಗಿದ್ದು, ವರುಣ ದೇವ ಅಡಿಕೆ, ಕಾಫಿ, ಮೆಣಸು ಬೆಳೆಗಾರರನ್ನ ಯಾವುದೇ ಅನುಮಾನವಿಲ್ಲದೆ ಬೀದಿಗೆ ತಂದು ನಿಲ್ಲಿಸಿದ್ದಾನೆ. ಭಾರೀ ಮಳೆ ಕಂಡು ತಿಂಗಳಿಂದ ತೋಟಕ್ಕೆ ಹೋಗದ ರೈತರು ತಿಂಗಳ ಬಳಿಕ ತೋಟಕ್ಕೆ ಬಂದು ನಿಂತಾಗ ಅವರ ಕಣ್ಣಿಗೆ ಕಂಡದ್ದು ಎರಡೇ. ಒಂದು ಬ್ಯಾಂಕ್ ಸಾಲ. ಮತ್ತೊಂದು ಮುಂದಿನ ಬದುಕು. ಯಾಕಂದ್ರೆ, ಮಲೆನಾಡಿನ ಮಹಾಮಳೆಗೆ ಕಾಫಿ ತೋಟ ಹಾಳಾಗಿರೋದು ಅರ್ಧವಾದ್ರೆ, ಬೆಳೆ ಮಣ್ಣಾಗಿರೋದು ಸಿಂಹಪಾಲು. ಈಗ ಕಾಫಿ ಕಾಯಾಗುವ ಸಮಯ. ಅಂದ್ರೆ, ಬೆಳೆಗಾರರ ಬದುಕು ಗಟ್ಟಿಯಾಗುವ ಕಾಲ. ಆದ್ರೆ, ಭಾರೀ ಮಳೆ-ಗಾಳಿಯಿಂದ ಕಾಫಿ ಕಾಯಿ ಉದುರಿರೋದ್ರಿಂದ ಬೆಳೆಗಾರರ ಬದುಕು ಮಣ್ಣುಪಾಲಾಗಿದೆ.

 

PHOTO:SHARATH PALGUNI

ಇಷ್ಟು ವರ್ಷಗಳ ಕಾಲ ಅನಾವೃಷ್ಟಿ, ಬೋರರ್, ಕಾರ್ಮಿಕರ ಸಮಸ್ಯೆ, ಬೆಲೆ-ಬೆಳೆ ಸಮಸ್ಯೆಯಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರು ಈ ವರ್ಷ ವರುಣದೇವನಿಂದ ಅತಂತ್ರವಾಗಿದ್ದಾರೆ. ಭಾರೀ ಮಳೆಯಿಂದ ಕಾಫಿ ತೋಟ ಶೀಥಕ್ಕೆ ತುತ್ತಾಗಿ ಗಿಡಗಳ ಕಾಂಡದಲ್ಲಿ ಬಲ ಇಲ್ಲದಂತಾಗಿ ಗಿಡಗಳು ಕೊಳೆತು ನೆಲಕ್ಕುರುಳುತ್ತಿವೆ. ಕಾಫಿ ತೋಟಗಳ ಇಂದಿನ ಪರಿಸ್ಥಿತಿ ನೋಡಿದರೆ, ಬಹುಶಃ ಮುಂದಿನ ಎರಡ್ಮೂರು ವರ್ಷವೂ ಕಾಫಿ ಬರೋದು ಅನುಮಾನ ಎಂಬಂತಹಾ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಂತೆ ಹಾರೈಕೆ ಮಾಡಿ ಸಾಕಿದ್ದ ಮೆಣಸಿನ ಬಳ್ಳಿಗಳನ್ನ ನೋಡಿದ್ರೆ ಬೆಳೆಗಾರರ ಕಣ್ಣಲ್ಲಿ ನೀರು ಬರುವಂತಿದೆ. ಯಾಕಂದ್ರೆ, ಹೇಳೋಕಷ್ಟೆ ಕಾಫಿ ಬೆಳೆಗಾರರು. ಅವರ ಬಲವೇ ಮೆಣಸು. ಕಾಫಿಯ ನಷ್ಟವನ್ನ ಮೆಣಸು ಬೆಳೆಗಾರರಿಗೆ ಕಾಣುವಂತೆ ಮಾಡುತ್ತಿರಲಿಲ್ಲ. ಹಾಗಾಗಿ, ಬೆಳೆಗಾರರು ಕಾಫಿ ಹಾಗೂ ಮೆಣಸನ್ನ ಒಂದು ಗಂಡು, ಒಂದು ಹೆಣ್ಣು ಮಕ್ಕಳೆಂದು ಸಾಕ್ತಿದ್ರು. ಆದ್ರೆ, ಕಳೆದೆರಡು ವರ್ಷದ ಹಿಂದೆ 700ರೂ  ಇದ್ದ ಮೆಣಸಿನ ದರ ಕಳೆದ ವರ್ಷ 500ರೂಗೆ  ಕುಸಿದಿತ್ತು, ಆದ್ರೆ, ಈ ವರ್ಷ ಮೆಣಸಿನ ದರ 300ಕ್ಕೆ ಬಂದಿರೋದ್ರಿಂದ ಬೆಳೆಗಾರರಿಗೆ ಇತ್ತ ಕಾಫಿಯೂ ಇಲ್ಲ, ಅತ್ತ ಮೆಣಸು ಇಲ್ಲ, ಮೆಣಸಿನ ಬೆಲೆಯೂ ಇಲ್ಲದಂತಾಗಿದೆ. ಇತ್ತ ಕಾರ್ಮಿಕರ ಸಮಸ್ಯೆ ಕೂಡ ಹೇರಳವಾಗಿದೆ. ಬೆಳಗ್ಗೆ 9.30ಕ್ಕೆ ಬಂದ್ರೆ 2 ಗಂಟೆಕೆ ಕೆಲಸಗಾರರು ಕೆಲಸ ಕೈ ಬಿಡ್ತಾರೆ. ದಿನಕ್ಕೆ 300-350 ಸಂಬಳ ನೀಡಬೇಕು. ಬೆಳೆಗಾರರಿಗೆ ತೋಟ ನಿರ್ವಹಣೆ ಮಾಡೋದು ಮತ್ತಷ್ಟು ತೊಂದರೆಯಾಗಿದೆ. ಆದ್ರೆ, ಈ ವರ್ಷದ ಮಳೆರಾಯನಿಂದ ಕಾಫಿಯ ಜತೆ ಮೆಣಸು ಬಹುತೇಕ ಹಾಳಾಗಿದೆ. ಗಿಡಗಳು ಸಿಲ್ವರ್ ಮರಕ್ಕೆ ಅಪ್ಪಿಕೊಂಡು ನಿಂತಿವೆ ಅನ್ನೋದನ್ನ ಹೊರತು ಪಡಿಸಿದ್ರೆ                        ಅವುಗಳಿಂದ ಬೆಳೆ ನಿರೀಕ್ಷೆ ಎರಡು ವರ್ಷಗಳ ನಂತರವಷ್ಟೆ.

                                         PHOTO:Sharath Palguni

ಹೇಳೋಕೆ ಸಮಯ ಸಾಲದು, ಬರೆಯೋಕೆ ಪದ ಸಾಲದು. ಅಷ್ಟು ದೊಡ್ಡದ್ದಿದೆ ಕಾಫಿ ಬೆಳೆಗಾರರ ನೋವು-ಕಷ್ಟ-ಕಾರ್ಪಣ್ಯ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಎಂಬಂತೆ, ಕಾಫಿ ಬೆಳೆಗಾರರಂದ್ರೆ ಎಲ್ಲರಿಗೂ ಅದೊಂದು ರೀತಿ ಅಸಡ್ಡೆ. ಸರ್ಕಾರಕ್ಕೂ ಕೂಡ. ಆದ್ರೆ, ಕಾಫಿ ಬೆಳೆಗಾರರ ಬದುಕು ನೀವು ತಿಳಿದಂತಿಲ್ಲ. ಹೆಸರಿಗಷ್ಟೆ ಪ್ಲಾಂಟರ್ಸ್. ಅವರ ಜೀವನ ನಾಯಿ ಪಾಡು. ಆದ್ದರಿಂದ, ಇಷ್ಟು ವರ್ಷಗಳ ಕಾಲ ಕಾಫಿ ಪ್ಲಾಂಟರ್ಸ್‍ಗಳೆಂದ್ರೆ ಸಾಹುಕಾರರೆಂದು ಭಾವಿಸಿ ಮನವಿಗಳನ್ನ ಕುರ್ಚಿ ಕೆಳಗೆ ಹಾಕಿ ಕುಳಿತುಕೊಳ್ತಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾದ್ರು ಕಾಫಿ ಬೆಳೆಗಾರರ ಸಮಸ್ಯೆ-ನೋವಿಗೆ ಸ್ಪಂದಿಸಬೇಕಿದೆ. ಇಂತಹಾ ಸಂದರ್ಭದಲ್ಲೂ ಬೆಳೆಗಾರರ ನೋವಿಗೆ ಸ್ಪಂದಿಸದಿದ್ರೆ ಸರ್ಕಾರಗಳು ಇನ್ಯಾವ ಸುಖಕ್ಕೆ. ಅಂತಹ ಸರ್ಕಾರಗಳು ಇದ್ದರೆಷ್ಟು-ಸತ್ತರೆಷ್ಟು ಎಂಬ ಭಾವನೆ ಬೆಳೆಗಾರರಲ್ಲಿ                          ಮೂಡೋದ್ರಲ್ಲಿ ಅನುಮಾನವಿಲ್ಲ.