ಚಿಕ್ಕಮಗಳೂರು : ಹಿಂದೂ ಸಮಾಜದ ಅಭಿವೃದ್ದಿಗಾಗಿ ತಮ್ಮ ಜೀವಿತದ ಕೊನೆಯವರೆಗೂ ದುಡಿದವರು ಪೇಜಾವರ ಶ್ರೀಪಾದರು : ಭೀಮಸೇನ್ ಜಿ.ಗುಟ್ಟಲ್.

157
firstsuddi

ಚಿಕ್ಕಮಗಳೂರು : ಇಡೀ ಹಿಂದೂ ಸಮಾಜದ ಅಭಿವೃದ್ದಿಗಾಗಿ ತಮ್ಮ ಜೀವಿತದ ಕೊನೆಯವರೆಗೂ ದುಡಿದವರು ಪೇಜಾವರ ಶ್ರೀಪಾದರು ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಭೀಮಸೇನ್ ಜಿ.ಗುಟ್ಟಲ್ ಹೇಳಿದರು.
ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ ಬ್ರಾಹ್ಮಣ ಮಹಾಸಭಾ ಸಾಂಸ್ಕೃತಿಕಸಂಘ ಮತ್ತು ಸಂಜೀವಿನಿ ವಿದ್ಯಾ ಸಂಸ್ಥೆ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಸ್ಮೃತಿ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೇಜಾವರ ಶ್ರೀಗಳೊಂದಿಗಿನ ತಮ್ಮ ಒಡನಾಟ, ಅವರ ಬದುಕು, ತತ್ವ, ಚಿಂತನೆಗಳನ್ನು ಭಕ್ತರೆದುರು ತೆರೆದಿಟ್ಟ ಗುಟ್ಟಲ್ ರಾಮಮಂದಿರ ಮುಕ್ತಿಯ ಹೋರಾಟದಲ್ಲಿ ಶ್ರೀಗಳದು ಪ್ರಮುಖ ಪಾತ್ರವಿದೆ ಎಂದರು.
ಸಾಮಾನ್ಯವಾಗಿ ಎಲ್ಲಾ ಮಠಾಧಿಪತಿಗಳೂ ತಮ್ಮ ಮಠಕ್ಕೆ ಸೀಮಿತವಾಗಿ ರುತ್ತಾರೆ ಅದಕ್ಕೆ ಅಪವಾದದಂತಿದ್ದ ಪೇಜಾವರ ಶ್ರೀಗಳು ಅಖಂಡ ಹಿಂದೂ ಸಮಾಜವನ್ನು ಕಟ್ಟಲು ಶ್ರಮಿಸಿದರು, ಮಾಧ್ವ ಪೀಠಾಧಿಪತಿಯಾಗಿ ದಲಿತ ಕೇರಿಗೆ ಪಾದಯಾತ್ರೆ ಮಾಡಿದ ಅವರು ಹಿಂದೂ ಸಮಾಜಕ್ಕೆ ಅಂಟಿರುವ ಅಸೃಷ್ಯತೆಯ ಪಿಡುಗನ್ನು ತೊಡೆದು ಹಾಕಬೇಕು, ನಮ್ಮ ಅಣ್ಣ ತಮ್ಮಂದಿರಾದ ದಲಿತರ ಮನೆಗೆ ನಾವೇ ಹೋಗದಿದ್ದರೆ ಇನ್ಯಾರು ಹೋಗಬೇಕು, ಎಂದು ಪ್ರಶ್ನಿಸುತ್ತಿದ್ದ ಶ್ರೀಗಳು ಇಡೀ ಹಿಂದೂ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ ಎನ್ನುತ್ತಿದ್ದರು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಎಲ್ಲರೂ ಆಟವಾಡಲು ಬಯಸುವ 6ನೇ ವಯಸ್ಸಿನಲ್ಲೇ ಸಂನ್ಯಾಸವನ್ನು ಆರಿಸಿಕೊಂಡವರು ಪೇಜಾವರ ಶ್ರೀಗಳು, ಸಮಾಜ ಸೇವೆಯನ್ನು ತಮ್ಮ ಬದುಕಿನ ಗುರಿಯಾಗಿರಿಸಿ ಕೊಂಡಿದ್ದ ಅವರೊಬ್ಬ ಸಮಾಜಮುಖಿ ಸಂತರಾಗಿ ಬಾಳಿದ ಯತಿ ಎಂದರು.
ಇದೇ ವೇಳೆ ನಾಮಸಾಧಕ ಸಮಿತಿ ವಿಶಾಲಾಕ್ಷಿ ಬಳಗದಿಂದ ಸಾಮೂಹಿಕ ಭಜನೆ, ಭಗವದ್ಗೀತೆ ಪಠಣ ನಡೆಯಿತು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಶಿ, ಉಪಾಧ್ಯಕ್ಷ ಎ.ವಿ.ಅನಂತರಾಮಯ್ಯ, ಸಾಂಸ್ಕøತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಶಂಕರನಾರಾಯಣ ಭಟ್, ಗೋಪಾಲಕೃಷ್ಣ, ವಿನೀತ್ ಕುಮಾರ್, ಆನಂದಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.