ಚಿಕ್ಕಮಗಳೂರು : ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ…

425
firstsuddi

ಚಿಕ್ಕಮಗಳೂರು : ಹದಿನೈದು ಮೆಟ್ರಿಕ್ ಟನ್‍ಗಿಂತ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ವೇದಿಕೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಛೇರಿ ಆವರಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹನುಮಂತಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ರಾಜ್ಯ ನಿರ್ದೇಶಕ ಸೋಮಾನಾಯಕ್ 15 ಮೆಟ್ರಿಕ್ ಟನ್‍ಗಿಂತ ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ಜಿಲ್ಲೆಯಲ್ಲಿ 2006 ರಲ್ಲಿ ನಿಷೇಧಿಸಿದೆ ಎಂದರು.
ಜಿಲ್ಲಾಡಳಿತ ನಿಷೇಧಿಸಿದ್ದರೂ ಸಹ ಅಧಿಕಾರಿಗಳು ಹಣದ ಆಸೆಗಾಗಿ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಅಧಿಕ ಭಾರ ಹೊತ್ತು ಸಾಗುವ ವಾಹನಗಳ ವಿರುದ್ದ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ 2014 ರಲ್ಲಿ ಆದೇಶ ನೀಡಿದ್ದರೂ ಅದನ್ನೂ ಉಲ್ಲಂಘಿಸಿ ಅಧಿಕಾರಿಗಳು ವಾಹನಗಳ ವಿರುದ್ದ ಕ್ರಮ ಕೈಗೊಳ್ಳದೆ ಕುಳಿತಿದ್ದಾರೆ ಎಂದು ದೂರಿದರು.
ಹೇಳುವವರು ಮತ್ತು ಕೇಳುವವರು ಇಲ್ಲದಿರುವುದರಿಂದಾಗಿ ಜಿಲ್ಲೆಯಲ್ಲಿ ವಾಹನಗಳು 40-50 ಟನ್‍ನಷ್ಟು ಭಾರ ಹೊತ್ತು ಸಂಚರಿಸುತ್ತಿವೆ, ಇದರಿಂದಾಗಿ ಜಿಲ್ಲೆಯ ರಸ್ತೆಗಳಲ್ಲಿ ಗುಂಡಿ ಬಿದ್ದು ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ, ದಿನೇದಿನೇ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಹದಗೆಟ್ಟ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದ ಅವರು ಈ ಹಿನ್ನೆಲೆಯಲ್ಲಿ ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು, ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಛೇರಿಯ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು, ರಾಜ್ಯ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಟಿ.ಕುಮಾರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಸಹಕಾರ್ಯದರ್ಶಿ ಸಮೀರ್, ಕಡೂರು ತಾಲ್ಲೂಕು ಅಧ್ಯಕ್ಷ ಬಾಬು, ಕಾರ್ಯದರ್ಶಿ ಲೋಕೇಶ್, ಸಹಕಾರ್ಯದರ್ಶಿ ರಂಜಿತ್ ನಾಯಕ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.