ಜೈಪುರ : ಗಡಿಯಲ್ಲಿ ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಯಾವುದೇ ಚಿಂತೆ ಇಲ್ಲದೆ ನಿದ್ರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಉಭಯ ದೇಶಗಳ ಸೈನಿಕರು ಕಾದಾಡಿದ ಬಳಿಕ ಈ ಬಗ್ಗೆ ಆತಂಕ ಮೂಡುತ್ತಿದೆ. ಚೀನಾ ನಮ್ಮ ದೇಶದ ಮೇಲೆ ದಾಳಿ ನಡೆಸಲು ಸಿದ್ಧವಾಗುತ್ತಿದೆ. ಚೀನಿ ಯೋಧರು ನಮ್ಮ ಯೋಧರಿಗೆ ಹೊಡೆಯುತ್ತಿದ್ದಾರೆ. ಇದರಿಂದ ಚೀನಾದ ಬೆದರಿಕೆ ನಮಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಇದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಸರ್ಕಾರ ಯದ್ಧ ಸನ್ನಿವೇಶವನ್ನು ಅಲ್ಲಗಳೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ದಾಳಿಗೆ ತಯಾರಿ ನಡೆಸುತ್ತಿದೆ. ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಚೀನಿ ಸೈನಿಕರು 17,000 ಅಡಿ ಎತ್ತರದ ಶಿಖರದ ತುದಿಗೆ ಪ್ರವೇಶಿಸಲು ಪ್ರಯತ್ನಿಸಿ, ಭಾರತೀಯ ಪೋಸ್ಟ್ ಅನ್ನು ಕಿತ್ತುಹಾಕಲು ಯತ್ನಿಸಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೀಗ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಅವರ ಅಜ್ಜ ಮಲಗಿದ್ದರು. ಅವರು ನಿದ್ದೆ ಮಾಡುವಾಗ ಭಾರತದ 37 ಸಾವಿರ ಚದರ ಕಿ.ಮೀ. ಪ್ರದೇಶ ಚೀನಾ ಪಾಲಾಗಿತ್ತು. ಆ ನಂತರ ರಾಹುಲ್ ಗಾಂಧಿ ಚೀನಾದೊಂದಿಗೆ ಸ್ನೇಹ ಬೆಳೆಸಬೇಕು ಎಂದು ಭಾವಿಸಿದ್ದರು. ಈಗ ಸ್ನೇಹವು ಅದೆಷ್ಟು ಆಳವಾಗಿದೆ ಎಂದರೆ, ಚೀನಾ ಏನು ಮಾಡುತ್ತಿದೆ ಎಂಬುದು ಅವರಿಗೆ ಮೊದಲೇ ಗೊತ್ತಿದೆ.
ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ 1.35 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಆದರೆ ಈಗ ಮೊದಲಿನಂತಿಲ್ಲ, ಭಾರತ ಬದಲಾಗಿದೆ. ಇದು ನೆಹರೂ ಭಾರತ ಅಲ್ಲ.. ಮೋದಿ ಭಾರತ. ದೇಶವನ್ನು ರಕ್ಷಿಸಲು ಸೇನೆಗೆ ಮುಕ್ತ ಅವಕಾಶವಿದೆ. ನಮ್ಮ ಸೈನ್ಯವು ಆಕ್ರಮಣ ನಡೆಸಿದರೆ ಸುಮ್ಮನಿರಲ್ಲ. 2014ರ ಬಳಿಕ ನಮ್ಮ ಸೈನ್ಯ ಗಡಿಯ ಭದ್ರತೆಯನ್ನು ಬಹಳ ಕಟ್ಟುನಿಟ್ಟಿನಿಂದ ಮಾಡುತ್ತಿದೆ. ಸರ್ಕಾರ ಸೈನ್ಯಕ್ಕೆ ಸಂಪೂರ್ಣ ಅವಕಾಶ ನೀಡುತ್ತಿದೆ ಎಂದರು.










