ಬೆಂಗಳೂರು: ಕರ್ನಾಟಕದಿಂದ ತಮಿಳುನಾಡಿಗೆ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿ ಹಾಗೂ ತಮಿಳುನಾಡಿನ ಕಾನ್ಸ್‌ಟೇಬಲ್ ಒಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಿಲ್ಪೆನ್ನತುರ್ ಠಾಣಾ ವ್ಯಾಪ್ತಿಯ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ನಡೆದಿದೆ.
ಕೆಎಸ್‍ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್ ಹಾಗೂ ತಮಿಳುನಾಡಿನ ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟ ಪೊಲೀಸರು ಎಂದು ತಿಳಿದು ಬಂದಿದೆ. ಪ್ರಭಾಕರ್ ಅವರು ಜೀಪ್‍ನಲ್ಲಿ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ತೆರಳುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಇಬ್ಬರ ಮೃತದೇಹಗಳನ್ನು ತಮಿಳುನಾಡಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕರ್ನಾಟಕ ಪೊಲೀಸರಿಗೆ ಹಸ್ತಾಂತರ ಮಾಡಲಾಗುವುದು. ಮೃತಪಟ್ಟಿರುವ ಬಗ್ಗೆ ಪ್ರಭಾಕರ್ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದ ರಭಸಕ್ಕೆ ಜೀಪ್ ಛಿದ್ರವಾಗಿದ್ದು, ಬಸ್‌ನ ಮುಂಭಾಗ ಸಹ ಜಖಂ ಆಗಿದೆ. ಒಟ್ಟು ಐವರು ಪೊಲೀಸರು ಜೀಪ್‍ನಲ್ಲಿದ್ದರು ಎಂದು ತಿಳಿದು ಬಂದಿದೆ. ಹೇಮಂತ್ ಕುಮಾರ್ (ಡೆಪ್ಯೂಟಿ ಕಮಾಂಡರ್), ವಿಟ್ಠಲ್ ಗಡಾದರ್ (ಹೆಡ್ ಕಾನ್ಸ್‌ಟೇಬಲ್), ಜಯಕುಮಾರ್ (ಕಾನ್ಸ್‌ಟೇಬಲ್) ಗಾಯಗೊಂಡಿದ್ದು, ಮೂವರನ್ನೂ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.










