ಛತ್ ಪೂಜೆಗೆ ಪ್ರಸಾದ ತಯಾರಿಸುತ್ತಿದ್ದಾಗ ಸಿಲಿಂಡರ್ ಸ್ಫೋಟ – 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ…

51
firstsuddi

ಪಾಟ್ನಾ : ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ನಸುಕಿನ ಜಾವ ಶಹಗಂಜ್ ಪ್ರದೇಶದಲ್ಲಿ ಅನಿಲ್ ಗೋಸ್ವಾಮಿ ಅವರ ಕುಟುಂಬಸ್ಥರು ಛತ್ ಪೂಜೆಗಾಗಿ ಪ್ರಸಾದವನ್ನು ತಯಾರಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗ್ಯಾಸ್ ಸೋರಿಕೆಯಾಗಿ ಬಳಿಕ ಆ ಬೆಂಕಿ ಇಡೀ ಮನೆಯನ್ನು ಆವರಿಸಿದೆ.

ಬೆಂಕಿಯನ್ನು ಆರಿಸಲು ಸ್ಥಳೀಯರು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಬೆಂಕಿ ತೀವ್ರಗೊಂಡಿದೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನದಲ್ಲಿ 7 ಮಂದಿ ಪೊಲೀಸ್ ಸಿಬ್ಬಂದಿಗೂ ಸುಟ್ಟ ಗಾಯಗಳಾಗಿವೆ.

ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಔರಂಗಾಬಾದ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಲವರನ್ನು ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಕಾರಣವನ್ನು ಇನ್ನೂ ದೃಢೀಕರಿಸಲಾಗಿಲ್ಲ ಎಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ.