ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಭಾರತೀಯ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತರ ಪಡೆಗಳೊಂದಿಗೆ ಪೂಂಚ್‌ನ ಸಿಂಧರಾ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ನಿನ್ನೆ ರಾತ್ರಿ 11:30 ರ ಸುಮಾರಿಗೆ ಭದ್ರತಾ ಪಡೆಗಳು ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರಿದರು. ನಂತರ ರಾತ್ರಿ ಸಮಯದಲ್ಲಿ ಕಣ್ಗಾವಲು ಉಪಕರಣಗಳೊಂದಿಗೆ ಡ್ರೋನ್‌ಗಳನ್ನು ನಿಯೋಜಿಸಲಾಯಿತು. ಇಂದು ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಉಗ್ರರು ಹತರಾಗಿದ್ದಾರೆ.
ಹತರಾದ ನಾಲ್ವರೂ ವಿದೇಶಿ ಉಗ್ರರಾಗಿದ್ದು, ಅವರ ಗುರುತನ್ನು ಪತ್ತೆ ಹಚ್ಚಾಲಾಗುತ್ತಿದೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.










