ಚೆನ್ನೈ: ತಾನು ಸತ್ತರೆ ಮಕ್ಕಳಿಗೆ ಪರಿಹಾರ ಧನ ಸಿಗಬಹುದು ಎಂದು ಚಲಿಸುತ್ತಿದ್ದ ಬಸ್‌ಗೆ ಅಡ್ಡಲಾಗಿ ಬಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
45 ವರ್ಷದ ಪಾಪತಿ, ವೇಗವಾಗಿ ಬಂದ ಬಸ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಮಹಿಳೆ. ಪತಿಯಿಂದ ಬೇರ್ಪಟ್ಟ ನಂತರ ಕಳೆದ 15 ವರ್ಷಗಳಿಂದ ಮಹಿಳೆ ಬೇರೆ ಮನೆ ಮಾಡಿಕೊಂಡಿದ್ದರು. ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದರು. ಸೇಲಂನ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಈ ಮಹಿಳೆ ಕೆಲಸ ಮಾಡುತ್ತಿದ್ದರು.
ಈಕೆ ಮೊದಲು ಬಸ್ಸಿನ ಮುಂದೆ ಜಿಗಿಯಲು ಪ್ರಯತ್ನಿಸಿದ್ದರು. ಆದರೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು. ಸ್ವಲ್ಪ ಸಮಯದ ನಂತರ ರಸ್ತೆ ದಾಟಲು ಪ್ರಯತ್ನಿಸುವವಳಂತೆ ಮತ್ತೊಂದು ಬಸ್‌ಗೆ ಅಡ್ಡಲಾಗಿ ಹೋಗಿದ್ದಾರೆ. ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ.
ಸಿಂಗಲ್ ಮದರ್ ಆಗಿರುವ ಪಾಪ್ಪತಿ ಅವರ ಮಕ್ಕಳು ಕಾಲೇಜಿನಲ್ಲಿ ಓದುತ್ತಿದ್ದಾರೆ. ಮಗಳು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕೋರ್ಸ್‌ನ ಅಂತಿಮ ವರ್ಷದಲ್ಲಿ ಓದುತ್ತಿದ್ದು ಮಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಓದುತ್ತಿದ್ದಾನೆ. ಆಕೆ ಬಡ ಕುಟುಂಬದವಳು. ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಧನ ಸಿಗುತ್ತದೆ ಎಂದು ಯಾರೋ ಆ ಮಹಿಳೆಯನ್ನು ದಾರಿ ತಪ್ಪಿಸಿದ್ದಾರೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.










