ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಗಲಾಟೆ- ಅಣ್ಣನನ್ನೇ ಕೊಲೆಗೈದ ತಮ್ಮ…

44
firstsuddi

ಹಾವೇರಿ: ಜಮೀನಿನಲ್ಲಿ ನೀರು ಹಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ವ್ಯಕ್ತಿಯೊಬ್ಬ ತನ್ನ ಅಣ್ಣನನ್ನೇ ಕೊಲೆಗೈದಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ. 

ಕೊಲೆಯಾದವನನ್ನು 62 ವರ್ಷದ ನಾಗಪ್ಪ ಬೆನಕನಹಳ್ಳಿ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದವನನ್ನು ಯಲ್ಲಪ್ಪ ಬೆನಕನಹಳ್ಳಿ ಎಂದು ಗುರುತಿಸಲಾಗಿದೆ.

ಜಮೀನಿಗೆ ನೀರು ಹಾಯಿಸುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಯಲ್ಲಪ್ಪ ಕೊಲಿನಿಂದ ನಾಗಪ್ಪನ ಎದೆಯ ಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ನಾಗಪ್ಪ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಆ ಕೂಡಲೇ ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯದಲ್ಲೆ ಸಾವನಪ್ಪಿದ್ದಾನೆ.

ಇತ್ತ ಕೊಲೆ ಆರೋಪಿ ಯಲ್ಲಪ್ಪನನ್ನು ಸವಣೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.