ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರ ಸಾವಿನ ಪ್ರಕರಣದ ತನಿಖಾ ಸಮಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಜೆ ಜಯಲಲಿತಾ ಅವರ ಸಾವಿನ ಕುರಿತಾದ ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ ವರದಿ ಇಂದು ವಿಧಾನಸಭೆಯಲ್ಲಿ ಮಂಡನೆಯಾಗಿದೆ. ತನಿಖಾ ಸಮಿತಿಯು ಜಯಲಲಿತಾ ಸಾವು ಪ್ರಕರಣದಲ್ಲಿ ಅವರ ಆಪ್ತ ಸಹಾಯಕಿ ವಿ.ಕೆ ಶಶಿಕಲಾ, ಡಾ ಶಿವಕುಮಾರ್ (ಜಯಲಲಿತಾ ಅವರ ಆಪ್ತ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ), ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ವಿರುದ್ಧ ದೋಷರೋಪ ಹೊರಿಸಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ಹೇಳಿದೆ.
2016ರ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆಸ್ಪತ್ರೆಯಲ್ಲಿ ದೀರ್ಘಾವಧಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ ಆರುಮುಗಸ್ವಾಮಿ ನೇತೃತ್ವದ ಸಮಿತಿಯನ್ನು 2017ರಲ್ಲಿ ರಚನೆ ಮಾಡಿತ್ತು.
ನ್ಯಾಯಮೂರ್ತಿ ಎ ಆರುಮುಗಸ್ವಾಮಿ ಸಮಿತಿಯು ಜಯಲಲಿತಾ ಆಸ್ಪತ್ರೆಗೆ ದಾಖಲಾದ ದಿನದಿಂದ ಅವರಿಗೆ ನೀಡಿದ ಎಲ್ಲಾ ಬಗೆಯ ಚಿಕಿತ್ಸೆಗಳ ಬಗ್ಗೆ ಅಧ್ಯಯನ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸಮಿತಿಯು ಈ ಹಿಂದೆ ವರದಿಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು.










