ಜರ್ಮನ್ ನ ಕ್ರಿಸ್‍ಮಸ್ ಮಾರುಕಟ್ಟೆಗೆ ಏಕಾಏಕಿ ನುಗ್ಗಿದ ಕಾರು: ಸೌದಿ ಮೂಲದ ವ್ಯಕ್ತಿ ಬಂಧನ.

34

ಮ್ಯಾಗ್ಡೆಬರ್ಗ್: ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ನಿನ್ನೆ ಶುಕ್ರವಾರ ಜನನಿಬಿಡ ಕ್ರಿಸ್‍ಮಸ್ ಮಾರುಕಟ್ಟೆಗೆ ಕಾರೊಂದು ನುಗ್ಗಿ ಇಬ್ಬರು ಸಾವನ್ನಪ್ಪಿದ್ದು ಕನಿಷ್ಠ 60 ಜನ ಗಾಯಗೊಂಡಿದ್ದಾರೆ, ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ. ವಾರಾಂತ್ಯ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದಾಗ, ಕಳೆದ ರಾತ್ರಿ ಸುಮಾರು 7 ಗಂಟೆಗೆ ಮಾರುಕಟ್ಟೆಗೆ ಕಾರು ನುಗ್ಗಿದ ಕೂಡಲೇ ಚಾಲಕನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಯಿತು. ಜರ್ಮನ್ ನ್ಯೂಸ್ ಏಜೆನ್ಸಿ ಡಿಪಿಎ ಬಿತ್ತರಿಸಿದ ದೃಶ್ಯಾವಳಿಗಳಲ್ಲಿ ರಸ್ತೆಯ ಮಧ್ಯದಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಶಂಕಿತನ ಬಂಧನವಾಗಿದೆ. ಘಟನೆಯಲ್ಲಿ 15 ಜನರು ಗಂಭೀರವಾಗಿ ಗಾಯಗೊಂಡಿರುವ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕ್ರಿಸ್ ಮಸ್, ಹೊಸವರ್ಷ ಆಚರಣೆಯ ದಿನಗಳಲ್ಲಿ ಈ ಹಿಂಸಾಚಾರವು ನಗರ ಜನತೆಯನ್ನು ಬೆಚ್ಚಿಬೀಳಿಸಿದೆ, ಶತಮಾನಗಳ-ಹಳೆಯ ಜರ್ಮನ್ ಸಂಪ್ರದಾಯದ ಭಾಗವಾಗಿರುವ ಹಬ್ಬದ ಕಾರ್ಯಕ್ರಮವನ್ನು ನಿನ್ನೆಯ ಘಟನೆ ಕೊಂದುಹಾಕಿದೆ. ಮುನ್ನೆಚ್ಚರಿಕೆಯಾಗಿ ವಾರಾಂತ್ಯದ ಕ್ರಿಸ್ಮಸ್ ಮಾರುಕಟ್ಟೆಗಳನ್ನು ಜರ್ಮನ್ ನ ಇತರ ಪಟ್ಟಣಗಳಲ್ಲಿ ಬಂದ್ ಮಾಡಲಾಗಿದೆ. ಶಂಕಿತ ವ್ಯಕ್ತಿ 2006 ರಲ್ಲಿ ಜರ್ಮನಿಗೆ ತೆರಳಿದ 50 ವರ್ಷದ ಸೌದಿ ವೈದ್ಯ ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ರಾಜ್ಯದ ಆಂತರಿಕ ಸಚಿವ ತಮಾರಾ ಝಿಸ್ಚಾಂಗ್ ಮಾಧ್ಯಮಗಳಲ್ಲಿ ಹೇಳಿದರು. ಮ್ಯಾಗ್ಡೆಬರ್ಗ್‍ನ ದಕ್ಷಿಣಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಬರ್ನ್‍ಬರ್ಗ್‍ನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ ಎಂದು ತಿಳಿಸಿದರು.