ಜಾನಪದಕ್ಕೆ ಸರ್ವರನ್ನೂ ಒಗ್ಗೂಡಿಸುವ ಶಕ್ತಿ ಇದೆ : ಬಸವರಾಜ ನೆಲ್ಲೀಸರ.

106
firstsuddi

ಚಿಕ್ಕಮಗಳೂರು : ಜಾನಪದಕ್ಕೆ ಸರ್ವರನ್ನೂ ಒಗ್ಗೂಡಿಸುವ ಶಕ್ತಿ ಇದೆ, ಅದು ಭಾಂದ್ಯವವನ್ನು ಬೆಸೆದು ಸಮಾಜವನ್ನು ಗಟ್ಟಿಗೊಳಿಸುತ್ತದೆ ಎಂದು ಕುವೆಂಪು ವಿ.ವಿ ನಿವೃತ್ತ ಪ್ರಾಧ್ಯಾಪಕ. ಜಾನಪದ ತಜ್ಞ ಡಾ|| ಬಸವರಾಜ ನೆಲ್ಲೀಸರ ಹೇಳಿದರು.

ತರೀಕೆರೆ ತಾಲೂಕಿನ ತ್ಯಾಗದ ಬಾಗಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಿನ್ನೆ ಆಯೋಜಿಸಿದ್ದ ಶ್ರಾವಣ ಸಂಜೆ ಜಾನಪದ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಹಿರಿಯರ ಕಾಲದಲ್ಲಿ ಜಾತಿ ಮತ ಮತ್ತು ಧರ್ಮಗಳ ಬೇಧವಿಲ್ಲದೇ ಎಲ್ಲರೂ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು. ಅದರಿಂದಾಗಿ ಅಂದು ಸಮಾಜದಲ್ಲಿ ಸಾಮರಸ್ಯತೆ ಮತ್ತು ಸೌಹಾರ್ದತೆ ಇತ್ತು ಎಂದರು.

ಆಧುನಿಕತೆಯ ಭರದಲ್ಲಿ ಇಂದಿನ ಪೀಳಿಗೆ ಜಾನಪದವನ್ನು ಮರೆತ ಕಾರಣ ಸಮಾಜದಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ, ಸೌಹಾರ್ದತೆ ಸಾಮರಸ್ಯ ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು, ಇಂದಿನ ಪೀಳಿಗೆ ಅದನ್ನು ಮೈಗೂಡಿಸಿಕೊಂಡರೆ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದು ತಿಳಿಸಿದರು.

ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ ಮಾತನಾಡಿ ಇಂದಿನ ಪೀಳಿಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ಅತ್ತೀಕಟ್ಟೆ ಗುರುನಾಥ ಗೌಡ, ಉಪಾಧ್ಯಕ್ಷ ಜಿ.ಎಸ್.ತಿಪ್ಪೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಸ್.ವಸಂತ್‍ಕುಮಾರ್, ಗ್ರಾ.ಪಂ. ಸದಸ್ಯ ನಂದೀಶ್, ಗ್ರಾಮದ ಮುಖಂಡರಾದ ನಾಗೇಶ್, ಕುಮಾರಸ್ವಾಮಿ, ದೇವರಾಜ್, ಬಿ.ಟಿ.ಸೋಮಶೇಖರ್, ಗಿರೀಶ್, ರಾಮೇಶಪ್ಪ ಉಪಸ್ಥಿತರಿದ್ದರು.

ಸಮಾರಂಭಕ್ಕೆ ಮುನ್ನ ಗ್ರಾಮದಲ್ಲಿ ವಿವಿಧ ಜಾನಪದ ಕಲಾ ತಂಡಗಳ ನಡುವೆ ಮೆರೆವಣಿಗೆ ನಡೆಯಿತು. ನಾಗೇಶ್ ತಂಡದಿಂದ ಜಾನಪದ ಗೀತೆಗಳ ಗಾಯನ ಜರುಗಿತು.