ಚಿಕ್ಕಮಗಳೂರು: ಜಾನಪದ ಕನ್ನಡ ಸಾಹಿತ್ಯದ ತಾಯಿ ಬೇರು ಎಂದು ಸಾಹಿತಿ, ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ತಲತಲಾಂತರಗಳಿಂದ ಬಾಯಿಂದ ಬಾಯಿಗೆ ಹರಿದು ಬಂದಿರುವ ಜಾನಪದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಮೂಲಸತ್ವವಾಗಿದೆ ಎಂದರು.
ನಿರಕ್ಷರಕುಕ್ಷಿಗಳಾದ ನಮ್ಮ ಜಾನಪದರು ದೈನಂದಿನ ಬದುಕಿನಲ್ಲಿನ ನೋವು, ನಲಿವು, ಸಂಬಂಧಗಳು, ಕೃಷಿ ಬದುಕು, ಪ್ರಕೃತಿಯೊಂದಿಗಿನ ಒಡನಾಟ, ಪ್ರೀತಿ ಇವುಗಳನ್ನು ಜಾನಪದ ಹಾಡುಗಳ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಹಾಗಾಗಿ ಜಾನಪದವನ್ನು ನಾವು ಮೈಗೂಡಿಸಿಕೊಂಡರೆ ನಮ್ಮ ಬದುಕು ಸಂಪತ್ಬರಿತವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಆಧುನಿಕತೆಯ ಭರದಲ್ಲಿ ನಾವು ಮರೆತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತೆ ಮೈಗೂಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಜಾನಪದ ಗೋಷ್ಠಿಯಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಉಪನ್ಯಾಸ ನೀಡಿದರು.
ಸಮ್ಮೇಳನಾಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ, ಆದಿಚುಂಚನಗಿರಿ ವಿವಿ ಕುಲಸಚಿವ ಡಾ.ಸಿ.ಕೆ.ಸುಬ್ರಾಯ, ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ, ಕಜಾಪ ತರೀಕೆರೆ ತಾಲೂಕು ಅಧ್ಯಕ್ಷ ಎನ್.ನಾಗೇಶ್, ಜಿಲ್ಲಾ ಉಪಾಧ್ಯಕ್ಷ ಗೊಂಡೆದಹಳ್ಳಿ ತಿಪ್ಪೇಶಪ್ಪ, ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್, ಕುಂಕನಾಡು ನಾಗರಾಜ್, ತಮನ್ನಾ ಮುನಾವರ್, ಮೇಕನಗದ್ದೆ ಲಕ್ಷ್ಮಣಗೌಡ ಹಾಜರಿದ್ದರು.
ಸಮಾರೋಪದ ನಂತರ ನಡೆದ ಸಾಂಸ್ಕೃತಿಕ ಕಲಾವೈಭವ ಕಾರ್ಯಕ್ರಮ ನೋಡುಗರ ಮನ ಗೆದ್ದಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಾವಿದರು ಜಾನಪದ ಗೀತೆಗಳ ಗಾಯನ, ನೃತ್ಯ, ಭಜನೆ, ಲಾವಣಿ, ಕೋಲಾಟ, ವಚನ ಗಾಯನ, ಗ್ರಾಮೀಣ ವಾದ್ಯಗಳ ಮೂಲಕ ನೋಡುಗರ ಕಣ್ಮನ ತಣಿಸಿದರು.
ಇದೇ ವೇಳೆ ನಡೆದ ಸುಗ್ಗಿ ಕುಣಿತದಲ್ಲಿ ಗ್ರಾಮೀಣ ವಾದ್ಯಗಳ ನಾದಕ್ಕೆ ಪರಿಷತ್ತಿನ ಪದಾಧಿಕಾರಿಗಳು ಮತ್ತು ನೆರೆದಿದ್ದ ಗಣ್ಯರೂ ಹೆಜ್ಜೆ ಹಾಕುವ ಮೂಲಕ ಕಲಾಮಂದಿರದಲ್ಲಿ ಸಂಚಲನ ಮೂಡಿಸಿದರು.










