ಜಾನಪದ ಕಲೆ ಜನರಿಗೆ ಮಾನಸಿಕ ಸಮಾಧಾನ ನೀಡುತ್ತದೆ : ಗೊ.ರು.ಚನ್ನಬಸಪ್ಪ

86
firstsuddi

ಚಿಕ್ಕಮಗಳೂರು : ಆಡಳಿತಾರೂಢ ಸರ್ಕಾರಗಳು ನಗರ ಭಾರತ ನಿರ್ಮಾಣದ ಭ್ರಮೆ ಬಿಟ್ಟು ಗ್ರಾಮ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹಿರಿಯ ಸಾಹಿತಿ, ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಹೇಳಿದರು.

ತರೀಕೆರೆ ತಾಲ್ಲೂಕಿನ ತ್ಯಾಗದಬಾಗಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ನಿನ್ನೆ ನಡೆದ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಕ್ಕಾಗಿ ದುಡಿದು ಅನ್ನ ಕೊಡುವ ರೈತರು ಜಾನಪದದ ಕತೃಗಳು, ಜಾನಪದ ಕಲೆ ಜನರಿಗೆ ಮಾನಸಿಕ ಸಮಾಧಾನ ನೀಡುತ್ತದೆ ಎಂದ ಅವರು ಜಾನಪದ ಸಂಸ್ಕೃತಿಯ ಪರಂಪರೆ ನಿಂತ ನೀರಾಗದೆ ಮುಂದುವರೆಯಬೇಕು ಎಂದರು.

ಬಂಡವಾಳವಿಲ್ಲದ ಕಲೆ ಮತ್ತು ಕ್ರೀಡೆಗಳನ್ನು ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣಲು ಸಾಧ್ಯ, ಸರಳ ಜೀವನವೇ ಜಾನಪದ ಧ್ಯೇಯವಾಗಿದ್ದು, ಜಾನಪದ ಕಲೆ ಜೀವಂತವಾಗಿರುವ ಹಳ್ಳಿಗಳ ಉದ್ದಾರ ಮೊದಲಾಗಬೇಕು, ಹಳ್ಳಿಗಾಡಿನಲ್ಲಿರುವ ಶ್ರೇಷ್ಠ ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಗಡಿ ಗ್ರಾಮಗಳಲ್ಲಿ ದೇಶಿಯ ಕಲೆಗಳನ್ನು ಉತ್ತೇಜಿಸುವ ಸಲುವಾಗಿ ಜಾನಪದ ಸಮ್ಮೇಳನವನ್ನು ಆಯೋಜಿಸಿರುವುದು ಅಭಿನಂದನಾರ್ಯ, ತ್ಯಾಗದಬಾಗಿಯಲ್ಲಿ ಸಾಕಷ್ಟು ಜಾನಪದ ಕಲಾವಿದರಿದ್ದು, ಅವರಿಂದಲೇ ಗ್ರಾಮೀಣ ಸೊಗಡಿನ ಕಲೆಗೆ ಬೆಲೆ ಸಿಕ್ಕಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಜಿ.ಎಸ್.ಆನಂದಮೂರ್ತಿ ಮಾತನಾಡಿ ಆಧುನಿಕತೆಯ ಯುಗದಲ್ಲಿ ಭಾರತದ ಸಂಸ್ಕೃತಿಯನ್ನು ಇಡೀ ವಿಶ್ವವೇ ಒಪ್ಪಿ ಅಪ್ಪುತ್ತಿರುವ ಕಾಲದಲ್ಲಿ ನಮ್ಮ ಜನ ಮೊಬೈಲ್ ಮೋಹಕ್ಕೆ ನಮ್ಮ ಸಂಸ್ಕೃತಿಯನ್ನೇ ಮರೆತಿರುವುದು ಬೇಸರದ ಸಂಗತಿ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಜಾನಪದ ಭಾರತೀಯ ಸಂಸ್ಕೃತಿಯ ತಾಯಿ ಬೇರಾಗಿದೆ, ಕೃಷಿ ಪರಿಸರದಲ್ಲಿ ಅದು ಬೆರೆತು ಹೋಗಿದೆ ಈ ಕಲೆಗಳ ಉಳಿವಿಗಾಗಿ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕುವೆಂಪು ವಿ.ವಿ.ಕುಲಪತಿ ಡಾ|| ಬಿ.ಪಿ.ವೀರಭದ್ರಪ್ಪ, ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ, ಕಜಾಪ ತಾಲ್ಲೂಕು ಅಧ್ಯಕ್ಷ ಆರ್.ನಾಗೇಶ್, ಬಸವ ಸಮಿತಿ ಸಂಚಾಲಕ ಕೆ.ಎಂ.ರೇವಣ್ಣ, ಗ್ರಾ.ಪಂ.ಅಧ್ಯಕ್ಷೆ ಚಂದ್ರಮ್ಮ, ತಾಲ್ಲೂಕು ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ, ಪಿ.ದೇವರಾಜ್, ನಾಗೇನಹಳ್ಳಿ ತಿಮ್ಮಯ್ಯ, ಟಿ.ಈ.ದೇವರಾಜ್, ಎಸ್.ಬಿ.ರಮೇಶ್, ಹೆಚ್.ಪಿ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಸಮ್ಮೇಳನಕ್ಕೆ ಮುನ್ನ ಸಮ್ಮೇಳನಾಧ್ಯಕ್ಷ ಜಿ.ಎಸ್.ಆನಂದಮೂರ್ತಿ ಅವರನ್ನು ವಿವಿಧ ಜಾನಪದ ಕಲಾ ತಂಡಗಳ ನಡುವೆ ಜೋಡೆತ್ತಿನ ಬಂಡಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.