ಕೋಲ್ಕತ್ತಾ : ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಹಾಗೂ ಟಿಎಂಸಿಯ ಬಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
ಇಂದು ಬೆಳಿಗ್ಗೆ ಸಶಸ್ತ್ರ ಪಡೆಗಳ ಸಮೇತ ಅನುಬ್ರತಾ ಮಂಡಲ್ ರ ಬಿರ್ಭುಮ್ ಜಿಲ್ಲೆಯ ಬೋಲ್ಪುರ್ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಅವರನ್ನು ನಿವಾಸದಲ್ಲಿಯೇ ವಶಕ್ಕೆ ಪಡೆದರು.
ಜಾನುವಾರು ಕಳ್ಳಸಾಗಾಣಿಕೆ ಪ್ರಕರಣದಲ್ಲಿ ತನ್ನ ತನಿಖೆಯ ಭಾಗವಾಗಿ ಮೊಂಡಲ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಈ ಹಿಂದೆ ಎರಡು ಬಾರಿ ವಿಚಾರಣೆಗೆ ಒಳಪಡಿಸಿತ್ತು. ಬಂಧನಕ್ಕೂ ಮುನ್ನ ಅವರಿಗೆ ಹತ್ತು ಬಾರಿ ಸಿಬಿಐ ಸಮನ್ಸ್ ನೀಡಿತ್ತು. ಆದರೆ ಪ್ರತಿಬಾರಿಯೂ ಆರೋಗ್ಯದ ಸಮಸ್ಯೆಯ ನೆಪವೊಡ್ಡಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
2020ರಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡ ಬಳಿಕ ಹಸುಗಳ ಕಳ್ಳ ಸಾಗಣೆ ಹಗರಣದಲ್ಲಿ ಮೊಂಡಲ್ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಗಡಿಯಾಚೆಗೆ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವೇಳೆ 2015 ರಿಂದ 2017ರ ಅವಧಿಯಲ್ಲಿ 20,000ಕ್ಕೂ ಅಧಿಕ ಹಸುಗಳ ಗುಂಪನ್ನು ಗಡಿ ಭದ್ರತಾ ಪಡೆ (ಬಿಎಸ್ ಎಫ್) ವಶಪಡಿಸಿಕೊಂಡಿತ್ತು ಎಂದು ಸಿಬಿಐ ಹೇಳಿದೆ.










