ಮುಂಬೈ : ಮಹಾರಾಷ್ಟ್ರ ಸರ್ಕಾರ ಹೇರಿದ್ದ ನಿಷೇಧವನ್ನು ರದ್ದುಗೊಳಿಸಿ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮತಿ ನೀಡಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಎಸ್.ಜಿ.ಡಿಗೆ ಅವರ ವಿಭಾಗೀಯ ಪೀಠವು, ಪೌಡರ್ ಉತ್ಪಾದನೆ ಮತ್ತು ಮಾರಾಟಕ್ಕೆ ಕಂಪನಿಗೆ ಅನುಮತಿ ನೀಡಿದೆ.
ಜಾನ್ಸನ್ಸ್ ಬೇಬಿ ಪೌಡರ್ ನಲ್ಲಿ ಹಾನಿಕಾರಕ ಅಂಶಗಳಿದ್ದು, ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸಬೇಕು ಎಂದು 2022ರ ಸೆಪ್ಟೆಂಬರ್ 15ರಂದು ಸೂಚನೆ ನೀಡಿ ಕಂಪನಿಯ ಪರವಾನಗಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿತ್ತು. ಈ ನಿರ್ಧಾರದ ವಿರುದ್ಧ ಜಾನ್ಸನ್ ಮತ್ತು ಜಾನ್ಸನ್ ಸಂಸ್ಛೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕಂಪನಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ.
ಸೌಂದರ್ಯವರ್ಧಕ ಉತ್ಪನ್ನಗಳಿಗೆ ಗುಣಮಟ್ಟ ಮತ್ತು ಸುರಕ್ಷತೆಯ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ, ಉತ್ಪನ್ನಗಳಲ್ಲಿ ಸ್ವಲ್ಪ ಸಮಸ್ಯೆ ಉಂಟಾದಾಗ ಇಡೀ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಸಮಂಜಸವಾಗಿ ತೋರುತ್ತಿಲ್ಲ ಎಂದು ಕೋರ್ಟ್ ಹೇಳಿದೆ.










