ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ, ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ ಮತ್ತೆ ಕಿರಿಕ್ ಮಾಡಿಕೊಂಡಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತ್ ಮತ್ತು ಆತನ ಎದುರು ಮನೆಯ ರಜತ್ ಗೌಡ ಫ್ಯಾಮಿಲಿಯ ಜಗಳ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿರುವುದಾಗಿ ರಜತ್ ಗೌಡ ಮತ್ತು ಆತನ ತಮ್ಮನ ವಿರುದ್ಧ ಸ್ನೇಹಿತ್ ಕಾರು ಚಾಲಕ ರಕ್ಷಿತ್ನಿಂದ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತ ರಜತ್ ಫ್ಯಾಮಿಲಿಯಿಂದಲೂ ದೂರು ದಾಖಲಾಗಿದೆ. ಜಾಸ್ತಿ ಮಾತಾಡಿದರೆ ಸೀರೆ ಬಿಚ್ಚಿ ಹೊಡಿತೀನಿ. ಇನ್ನೂ ಜಾಸ್ತಿ ಮಾತನಾಡಿದರೆ ಮುಗಿಸಿ ಬಿಡ್ತೀನಿ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಜತ್ ಗೌಡ ಪತ್ನಿ ಅನ್ನಪೂರ್ಣ ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಇಬ್ಬರ ದೂರುಗಳ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.










