ಚೆಕ್​ಗೆ ಸಹಿ ಹಾಕಲು ಮುರುಘಾ ಶ್ರೀಗಳಿಗೆ ಹೈಕೋರ್ಟ್ ಅನುಮತಿ – ಷರತ್ತು ಅನ್ವಯ…

55
firstsuddi

ಬೆಂಗಳೂರು: : ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಂದ ವೇತನ ಪಾವತಿಸುವ ಚೆಕ್ ಗಳಿಗೆ ಸಹಿ ಹಾಕಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಬ್ಯಾಂಕ್ ಖಾತೆಗಳ ಚೆಕ್ ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮುರುಘಾ ಶ್ರೀಗಳು ವೇತನಕ್ಕೆ ಸಂಬಂಧಿಸಿದ ಚೆಕ್ ಗಳಿಗೆ ಮಾತ್ರ ಸಹಿ ಹಾಕಬೇಕು. ಸಹಿ ಪಡೆಯಲು ಚಿತ್ರದುರ್ಗ ಸೆಂಟ್ರಲ್ ಜೈಲಿನ ಅಧಿಕಾರಿಗಳು ಸಂಬಂಧಪಟ್ಟವರಿಗೆ ಅನುಮತಿ ನೀಡಬೇಕು. ಸಹಿ ಹಾಕುವ ವೇಳೆ ತನಿಖಾಧಿಕಾರಿ, ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು ಎಂದು ಹೇಳಿದೆ.

ಈ ಅನುಮತಿ ಅಕ್ಟೋಬರ್ ತಿಂಗಳಿಗೆ ಮಾತ್ರ ಈ ಆದೇಶ ಅನ್ವಯ. ಮುಂದಿನ ತಿಂಗಳಿನಿಂದ ಚೆಕ್ ಗಳಿಗೆ ಸಹಿ ಹಾಕುವ ಅಧಿಕಾರವನ್ನು ಶರಣರಿಂದ ಮತ್ತೊಬ್ಬರಿಗೆ ವರ್ಗಾಯಿಸುವ ಸಂಬಂಧ ಪವರ್ ಆಫ್ ಅಟಾರ್ನಿ ವ್ಯವಸ್ಥೆ ಮಾಡಬೇಕು ಎಂಬ ಮನವಿಯನ್ನು ಅರ್ಜಿದಾರರು ವಿಚಾರಣಾ ನ್ಯಾಯಾಲಯ ಸಲ್ಲಿಸಬೇಕು. ನ್ಯಾಯಾಲಯ ಮನವಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಮಾಡಬಹುದು ಎಂದು ವಿಚಾರಣಾ ನ್ಯಾಯಾಲಯಕ್ಕೆ ನ್ಯಾಯಪೀಠವು ಸೂಚನೆ ನೀಡಿದೆ.

ಮುರುಘಾ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ವೇತನ ನೀಡಬೇಕಾದರೆ ಶಿವಮೂರ್ತಿ ಶರಣರು ಚೆಕ್ ಗಳಿಗೆ ಸಹಿ ಮಾಡಬೇಕು. ಇಲ್ಲವಾದಲ್ಲಿ ವೇತನ ಬಿಡುಗಡೆ ಆಗುವುದಿಲ್ಲ. ಹೀಗಾಗಿ ಚೆಕ್ ಗಳಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು.