ಚಾಮರಾಜನಗರ : ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಜೀಪ್ ನಿಂದ ಬಿದ್ದು ಆರೋಪಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ಕೇಸ್ ದಾಖಲಾಗಿದೆ.
ಯಳಂದೂರು ವೃತ್ತದ ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಎಸ್ ಐ ಮಾದೇಗೌಡ, ಪೊಲೀಸ್ ಕಾನ್ಸ್ ಟೇಬಲ್ ಸೋಮಣ್ಣ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಪೊಲೀಸರು ಮಗನನ್ನು ಹಿಂಸಿಸಿ ಕೊಂದಿದ್ದಾರೆಂದು ಮೃತ ನಿಂಗರಾಜು ತಾಯಿ ಮಹದೇವಮ್ಮ ಯಳಂದೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಘಟನೆಯೇನು?: ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು ಎಂಬಾತನ ವಿರುದ್ಧ ಮಾಂಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆ ಪೊಲೀಸರು ನಿಂಗರಾಜುನನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯುವಾಗ ಜೀಪ್ ನಿಂದ ನೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ನಿಂಗರಾಜುನನ್ನು ಯಳಂದೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.










