ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ಜು.17 ರಂದು (ಸೋಮವಾರ) ಗೃಹಲಕ್ಷ್ಮಿ ಯೋಜನೆ ಆ್ಯಪ್‌ಗೆ ಚಾಲನೆ ನೀಡಲಾಗುವುದು. ಗೃಹ ಲಕ್ಷ್ಮೀ ಯೋಜನೆಗೆ ಫಲಾನುಭವಿಗಳ ನೋಂದಣಿ ಜುಲೈ 19 ರಿಂದ ಆರಂಭವಾಗಲಿದೆ ಎಂದು ತಿಳಿಸಿದರು.
ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿರಬಾರದು. ಅಂತಹವರಿಗೆ ಈ ಯೋಜನೆ ಸೌಲಭ್ಯ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್ಎಂಎಸ್ ಮೂಲಕ ರವಾನೆ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಮಾಡಲಾಗುವುದು. ಪರ್ಯಾಯವಾಗಿ “ಪ್ರಜಾಪ್ರತಿನಿಧಿ” (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ಮಹಿಳೆಯರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಒಂದು ವೇಳೆ ನಿಗದಿತ ದಿನಾಂಕ, ಸಮಯಕ್ಕೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದೆ ಯಾವುದೇ ದಿನಾಂಕ ಅಥವಾ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಯೋಜನೆಯಡಿ ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಂಬರ್ ಜೋಡಣೆಯಾಗಿರುವ (ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿಯನ್ನು ಫಲಾನುಭವಿಗಳು ಕೊಡಬೇಕು. ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರವನ್ನು ಕೂಡ ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರವನ್ನು ತದನಂತರ ತಮ್ಮ ಮನೆಗೆ ತಲುಪಿಸಲಾಗುವುದು ಎಂದು ಹೇಳಿದರು.










