ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸ ಮತಯಾಚನೆ ಪ್ರಕ್ರಿಯೆ ಬಳಿಕ ಮೈತ್ರಿ ಸರ್ಕಾರ ಪತನವಾಗಿದ್ದು, ಜುಲೈ 31ರ ಒಳಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ಹಣಕಾಸು ವಿಚಾರದಲ್ಲಿ ಸಮಸ್ಯೆಯಾಗುತ್ತದೆ. ಫೈನಾನ್ಸ್ ಬಿಲ್ ಪಾಸಾಗದಿದ್ದರೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿರುವುದಿಲ್ಲ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಕ ಬಿಕ್ಕಟ್ಟು ಎದುರಾಗಿದೆ. ಒಂದು ವೇಳೆ ಜುಲೈ 31ರ ಒಳಗೆ ಸರ್ಕಾರ ರಚನೆ ಮಾಡದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ. ಈ ವೇಳೆ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ವಿಷಯದ ಬಗ್ಗೆ ಮಾತನಾಡಿದ್ದು, ನಾನು ಶಾಸಕರಿಗೆ ರಾಜೀನಾಮೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೆ, ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಪದೇ ಪದೇ ನೋಟೀಸ್ ಕೊಡುವುದಕ್ಕೆ ನನಗೆ ಬೇರೆ ಏನೂ ಕೆಲಸ ಇಲ್ವಾ? ಈಗಾಗಲೇ ಒಂದು ಬಾರಿ ನೋಟೀಸ್ ನೀಡಿದ್ದೇನೆ. ಅವರು ಬಂದಿಲ್ಲ ಅಂದರೆ ನಾನೇನು ಮಾಡಲಿ? ನನ್ನ ಕೆಲಸ ನಾನು ಮಾಡಿದ್ದೇನೆ. ರಾಜೀನಾಮೆ ಬೇಕಾದರೆ ವಿಚಾರಣೆಗೆ ಬರಲಿ ಇಲ್ಲದಿದ್ದರೆ ಇಲ್ಲ ಎಂದು ಹೇಳಿದರು.










