ರಷ್ಯಾ : ಜೋಳದ ಗದ್ದೆ ನಡುವೆ ತುರ್ತಾಗಿ ವಿಮಾನವನ್ನು ಲ್ಯಾಂಡ್ ಮಾಡುವ ಮೂಲಕ ಪೈಲಟ್ 233 ಪ್ರಯಾಣಿಕರ ಜೀವ ಉಳಿಸಿರುವ ಘಟನೆ ರಷ್ಯಾದ ಮಾಸ್ಕೋ ಹೊರವಲಯದಲ್ಲಿ ನಡೆದಿದೆ. 233 ಪ್ರಯಾಣಿಕರಿದ್ದ ವಿಮಾನ ಮಾಸ್ಕೋದಿಂದ ಟೇಕ್ ಆಫ್ ಆಗುತ್ತಿದ್ದಂತೆ ವಿಮಾನದ ರೆಕ್ಕೆ ಹಾಗೂ ಇಂಜಿನ್ ಭಾಗಕ್ಕೆ ಹಕ್ಕಿಗಳ ಗುಂಪು ಬಂದು ಬಡಿದು ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಇನ್ನೊಂದು ಇಂಜಿನ್ ಕೂಡಾ ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಕೂಡಲೇ ಇದನ್ನು ಅರಿತ ಪೈಲಟ್ ಧೈರ್ಯದಿಂದ ಜೋಳದ ಗದ್ದೆ ನಡುವೆ ಇಂಜಿನ್‍ನ ಸಹಾಯವಿಲ್ಲದೆ ತುರ್ತಾಗಿ ವಿಮಾನವನ್ನು ಲ್ಯಾಂಡ್ ಮಾಡಿದರು. ಗದ್ದೆ ನಡುವೆ ವಿಮಾನವನ್ನು ಲ್ಯಾಂಡ್ ಮಾಡಿರುವುದರಿಂದ 23ಮಂದಿ ಪ್ರಯಾಣಿಕರಿಗೆ ಗಾಯವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.










